ಬೆಂಗಳೂರು:ಲಾಕ್ಡೌನ್ ಹೆಸರು ಬಳಸದೇ ನಗರದ ಎಲ್ಲ ವ್ಯಾಪಾರ ವಹಿವಾಟನ್ನು ನಿಲ್ಲಿಸಿದ ಸರ್ಕಾರ ಈಗ ತೆರಿಗೆ ವಿನಾಯಿತಿ, ಬಾಡಿಗೆಯಲ್ಲಿ ಮಧ್ಯಸ್ಥಿಕೆ ವಹಿಸಿಬೇಕು ಎಂದು ವ್ಯಾಪಾರಸ್ಥರು ಆಗ್ರಹ ಮಾಡುತ್ತಿದ್ದಾರೆ.
ಎರಡು ವಾರ ನಗರದ ಎಲ್ಲ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ನಮ್ಮ ವ್ಯಾಪಾರಕ್ಕೆ ನಷ್ಟ ಆಗಿದೆ. ಸರ್ಕಾರ ಹೇಳಿದ ಕೂಡಲೇ ವ್ಯಾಪಾರಸ್ಥರು ಎಲ್ಲ ಅಂಗಡಿಗಳನ್ನ ಮುಚ್ಚುವ ಮೂಲಕ ಸಹಕಾರ ನೀಡಿದ್ದೇವೆ. ಆದರೆ, ಈಗ ಸರ್ಕಾರ ನಮಗೆ ಶೇ 25ರಷ್ಟು ತೆರಿಗೆ ವಿನಾಯಿತಿ ಹಾಗೂ ಎರಡು ವಾರದ ವಿದ್ಯುತ್ ದರ ವಿನಾಯಿತಿ ನೀಡಬೇಕು ಎಂದು ಸಗಟು ಜವಳಿ ವ್ಯಾಪಾರ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿದರು.
ತೆರಿಗೆ ವಿನಾಯಿತಿಗೆ ಪಟ್ಟು ಹಿಡಿದ ವ್ಯಾಪಾರಸ್ಥರು ವರ್ತಕರ ಪ್ರಕಾರ ಈಗಾಗಲೇ ಎರಡನೇ ಅಲೆ ಪ್ರಾರಂಭದಲ್ಲಿ ನಮಗೆ ಶೇ. 50 ರಷ್ಟು ವ್ಯಾಪಾರ ಕಡಿಮೆ ಆಗಿತ್ತು, ಈಗ ಸರ್ಕಾರ ಎರಡು ವಾರದ ಅಘೋಷಿತ ಲಾಕ್ಡೌನ್ನಲ್ಲಿ ಪೂರ್ಣ ಪ್ರಮಾಣದ ನಷ್ಟ ಉಂಟಾಗಿದೆ. ಜೊತೆಗೆ ಏಪ್ರಿಲ್ 31ಕ್ಕೆ ಆಸ್ತಿ ತೆರಿಗೆಗೆ ಕೊನೆಯ ದಿನ ಆಗಿದೆ. ಹೀಗಾಗಿ ದಿನಾಂಕ ಮುಂದೂಡುವ ಜೊತೆಗೆ ರಿಯಾಯಿತಿ ಘೋಷಣೆ ಮಾಡಬೇಕು ಎಂದು ಅಂಗಡಿ ಮಾಲೀಕರ ಕೂಗಾಗಿದೆ.
ಈ ವಿಷಯವಾಗಿ ನಿನ್ನೆ ರಾಜ್ಯದ ಹಲವಾರು ವರ್ತಕರ ಒಕ್ಕೂಟ ಕಾಂಗ್ರೆಸ್ ಪಕ್ಷದ ಜೊತೆ ಮಾತನಾಡಿ ಸೋಮವಾರ ಸಭೆ ನಡೆಸಲು ನಿರ್ಧರಿಸಿದೆ. ಸರ್ಕಾರ ರಾಜ್ಯದ ಎಲ್ಲ ವರ್ತಕರಿಗೆ ಹಾಗೂ ಕೆಲಸ ಕಳೆದುಕೊಂಡವರಿಗೆ ಸಹಾಯ ಧನ ನೀಡಲು ಒತ್ತಡ ಹೇರಲು ಕೆಪಿಸಿಸಿ ಕೂಡ ನಿರ್ಧರಿಸಿದೆ.