ಕರ್ನಾಟಕ

karnataka

ಕೆಐಎಡಿಬಿ ಸಲಹೆಗಾರನಾಗಿ ಟಿ.ಆರ್.ಸ್ವಾಮಿ ನೇಮಕಕ್ಕೆ ಸೂಚಿಸಿ ಪತ್ರ : ಈಗ ಪತ್ರ ಹಿಂಪಡೆದ ಸಚಿವ ನಿರಾಣಿ!

By

Published : Dec 1, 2022, 10:54 PM IST

ಕೆಐಎಡಿಬಿಯಲ್ಲಿ ತಾಂತ್ರಿಕ ಸಲಹೆಗಾರರ ಹುದ್ದೆಗೆ ಮತ್ತೆ ಟಿ.ಆರ್.ಸ್ವಾಮಿಯನ್ನು ನೇಮಿಸುವಂತೆ ಸ್ವತಃ ಸಚಿವ ನಿರಾಣಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಇದೀಗ ನೇಮಕ ಮಾಡುವಂತೆ ಸೂಚಿಸಿ ಹೊರಡಿಸಿದ್ದ ಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

tr-swamy-as-kiadb-adviser-letter-withdrawn-by-minister-murugesh-nirani
ಕೆಐಎಡಿಬಿ ಸಲಹೆಗಾರನಾಗಿ ಕಳಂಕಿತ ಟಿ.ಆರ್.ಸ್ವಾಮಿ ನೇಮಕಕ್ಕೆ ಸೂಚಿಸಿ ಪತ್ರ : ಈಗ ಪತ್ರ ಹಿಂಪಡೆದ ಸಚಿವ ನಿರಾಣಿ!

ಬೆಂಗಳೂರು :ಎಸಿಬಿ ದಾಳಿ ವೇಳೆ ಕಿಟಕಿಯಿಂದ ನಗದು ಎಸೆದ ಕುಖ್ಯಾತಿಗೊಳಗಾಗಿದ್ದ ನಿವೃತ್ತ ಕೆಐಎಡಿಬಿ ಅಧಿಕಾರಿ ಟಿ.ಆರ್.ಸ್ವಾಮಿಗೆ ಮತ್ತೆ ಕೆಐಎಡಿಬಿಯಲ್ಲಿ ಜವಾಬ್ದಾರಿ ನೀಡಲು ಮುಂದಾಗಿದ್ದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

2018ರಲ್ಲಿ ಎಸಿಬಿ ದಾಳಿ ಆದಾಗ ಕಿಟಕಿಯಿಂದ 10 ಲಕ್ಷ ನಗದು ಎಸೆದಿದ್ದ ಟಿ.ಆರ್ ಸ್ವಾಮಿಗೆ ಮತ್ತೆ ಮಹತ್ವದ ಹೊಣೆ ನೀಡಲು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದರು. ಕೆಐಎಡಿಬಿಯಲ್ಲಿ ತಾಂತ್ರಿಕ ಸಲಹೆಗಾರರ ಹುದ್ದೆಗೆ ಮತ್ತೆ ಟಿ.ಆರ್.ಸ್ವಾಮಿಯನ್ನು ನೇಮಿಸುವಂತೆ ಸ್ವತಃ ಸಚಿವ ನಿರಾಣಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಸಚಿವರ ಈ ಪತ್ರ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಎಸಿಬಿ ದಾಳಿಗೊಳಗಾಗಿದ್ದಷ್ಟೇ ಅಲ್ಲ, ದಾಳಿ ವೇಳೆ ಕಿಟಕಿಯಿಂದ ನಗದು ಬಿಸಾಕಿದ ಕುಖ್ಯಾತಿಗೆ ಒಳಗಾಗಿದ್ದರು. ದಾಳಿ ವೇಳೆ ಸುಮಾರು 5 ಕೋಟಿ ರೂ. ನಗದು ಪತ್ತೆಯಾಗಿತ್ತು. ಆರೋಪದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು. ಟಿ.ಆರ್.ಸ್ವಾಮಿ 2020ರ ಜೂನ್ ನಲ್ಲಿ ನಿವೃತ್ತಿ ಆಗಿದ್ದರು. ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವ ಟಿ.ಆರ್.ಸ್ವಾಮಿಯನ್ನು ಕೆಐಎಡಿಬಿ ತಾಂತ್ರಿಕ ಸಲಹೆಗಾರನಾಗಿ ನೇಮಿಸುವಂತೆ ಸಚಿವ ನಿರಾಣಿ ಪತ್ರ ಬರೆದಿದ್ದರು.

ಟಿ.ಆರ್. ಸ್ವಾಮಿಗೆ ಮತ್ತೆ ಹುದ್ದೆ ನೀಡಲು ಮುಂದಾಗಿರುವ ಕ್ರಮಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ನೇಮಕ ಮಾಡಿದರೆ, ಪ್ರತಿಪಕ್ಷಗಳಿಗೆ ಆಹಾರವಾಗುವ ಆತಂಕ ಜೊತೆಗೆ ಸಾರ್ವಜನಿಕವಾಗಿ ಟೀಕೆಗೊಳಗಾಗುವ ಹಿನ್ನೆಲೆಯಲ್ಲಿ ಸಿಎಂ ಕೂಡ ಸಚಿವ ನಿರಾಣಿಗೆ ನೇಮಕ ಮಾಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆ ಸಚಿವ ನಿರಾಣಿ ಇದೀಗ ಟಿ.ಆರ್.ಸ್ವಾಮಿ ನೇಮಕ ಮಾಡುವಂತೆ ಸೂಚಿಸಿ ಹೊರಡಿಸಿದ್ದ ಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ‌ಕಾರ್ಯದರ್ಶಿಗೆ ಪತ್ರ ಬರೆದು ನೇಮಕಕ್ಕೆ ಸೂಚಿಸಿ ಬರೆಯಲಾದ ಪತ್ರವನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ :ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಹೈಕೋರ್ಟ್ ಕಿಡಿ

ABOUT THE AUTHOR

...view details