ಕೊಪ್ಪಳ:ಕೊರೊನಾದಿಂದಾಗಿ ರಾಜ್ಯದ ಪ್ರವಾಸಿ ತಾಣಗಳು ಭಣಗುಡುತ್ತಿದೆ. ಇನ್ನು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದ ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರು ಎಲ್ಲಾ ಸಮಯದಲ್ಲೂ ತುಂಬಿರುತ್ತಿದ್ದರು. ಆದರೆ ಕಳೆದ ಐದಾರು ತಿಂಗಳಿನಿಂದ ಹಂಪೆಯೂ ಸಹ ಜನರಿಲ್ಲದೆ ಸೊರಗಿದೆ.
ಕೊಪ್ಪಳ ಜಿಲ್ಲೆಯ ಆನೆಗುಂದಿ ಭಾಗಕ್ಕೆ ಭೇಟಿ ನೀಡದೆ ಇದ್ದರೆ ಅವರಿಗೆ ಹಂಪೆ ಪ್ರವಾಸ ಕಂಪ್ಲೀಟ್ ಆಗೋದಿಲ್ಲ ಅನ್ನೋವಷ್ಟರ ಮಟ್ಟಿಗೆ ಪ್ರವಾಸಿಗರ ಭಾವನೆ ಇದೆ. ಅದಕ್ಕೆ ಕಾರಣ ಗಂಗಾವತಿ ತಾಲೂಕಿನ ಆನೆಗುಂದಿ ಭಾಗದಲ್ಲಿರುವ ಅನೇಕ ಪ್ರವಾಸಿ ತಾಣಗಳು ಕೈಬೀಸಿ ಕರೆಯುತ್ತವೆ. ಹಂಪೆಗೆ ಬರುವ ಬಹುಪಾಲು ಪ್ರವಾಸಿಗರು ಆನೆಗುಂದಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿಯೇ ಹೋಗುತ್ತಾರೆ.
ಅದರಲ್ಲೂ ಸಾಣಾಪುರ ಕೆರೆ ಅಂದರೆ ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಈ ಬಾರಿ ಈಗಾಗಲೇ ತುಂಗಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಬಿಡಲಾಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ಈ ಸಾಣಾಪುರ ಕೆರೆಯ ಮೂಲಕವೇ ಮುಂದೆ ಸಾಗುತ್ತದೆ. ಹೀಗಾಗಿ ಸಾಣಾಪುರ ಕೆರೆ ಈಗಾಗಲೇ ನೀರಿನಿಂದ ತುಂಬಿ ತುಳುಕುತ್ತಿದೆ.