ಬೆಂಗಳೂರು:ನಗರದಕುಮಾರ ಕೃಪ ಅತಿಥಿ ಗೃಹದಲ್ಲಿ 'ಕೃಷಿ ಪ್ರವಾಸ' ಎಂಬ ಪರಿಕಲ್ಪನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ತೋಟಗಾರಿಗೆ ಸಚಿವ ನಾರಾಯಣಗೌಡ ಮೂರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೂವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಸಚಿವ ಸಿ.ಟಿ. ರವಿ ಮಾತನಾಡಿ, ಚುನಾವಣಾ ಪೂರ್ವದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯರು ಎಂದು ಘೋಷಿಸಿದೆ. ಅಲ್ಲದೆ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಕೇಂದ್ರದ ನಾಯಕರು ಕೂಡ ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿ, ಸರ್ವಾನುಮತದಿಂದ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಈಗ ಆ ವಿಷಯದ ಬಗ್ಗೆ ಯಾರು ತಕರಾರು ಎತ್ತಬಾರದು ಎಂದು, ಬಿಎಸ್ವೈ ನಾಯಕತ್ವ ಬದಲಾಯಿಸಬೇಕೆಂದು ಬಿಜೆಪಿಯಲ್ಲಿ ಭುಗಿಲೆದ್ದಿರುವ ನಾಯಕರಿಗೆ ಟಾಂಗ್ ನೀಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು, ಯಡಿಯೂರಪ್ಪ ಅವರ ನಾಯಕತ್ವ ಬದಲಾಯಿಸಬೇಕು ಎಂದು ಹೇಳಿದ್ದಾರೆ ಎಂಬುದು ಮಾಧ್ಯಮಗಳ ಊಹೆಯಾಗಿದೆ. ಅವರು ಕೇಂದ್ರ ಸಚಿವರಾಗಿದ್ದವರು, ಅವರ ಬಗ್ಗೆ ನಾನು ಏನು ಮಾತನಾಡಲ್ಲ ಎಂದರು. ಇನ್ನು ನನ್ನ ವಿರೋಧಿಗಳು ನನ್ನ ಚಡ್ಡಿ ಗುಂಪಿನ ನಾಯಕ ಅಂತಾರೆ. ಅದ್ರಿಂದ ನಾನು ಚಡ್ಡಿ ಗುಂಪಿನಲ್ಲಿ ಇದ್ದೇನೆ ಎಂದು ಹೇಳುವ ಮೂಲಕ, ಪಕ್ಷದ ಆಂತರಿಕ ಭಿನ್ನಮತವನ್ನು ಮುಚ್ಚಿಕೊಳ್ಳುದಕ್ಕೆ ತೇಪೆ ಹಾಕುವ ಕೆಲಸ ಮಾಡಿದರು.
ಇನ್ನು ರೈತರ ಹಾಗೂ ಗ್ರಾಮೀಣ ಭಾಗದ ಜನರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ, ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ, ರಾಜ್ಯದ ವೈವಿದ್ಯತೆಯನ್ನು ದೇಶ ವಿದೇಶದ ಮಟ್ಟದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಈ ಅಗ್ರಿ ಟೂರಿಸಂ ('ಕೃಷಿ ಪ್ರವಾಸ') ವನ್ನು ಜಾರಿಗೆ ತರಲು ಅಲೋಚಿಸಲಾಗಿದೆ ಎಂದರು.