ಬೆಂಗಳೂರು:ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಆದಿ ಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿ ಅವರ ಹುಟ್ಟೂರಿನಲ್ಲಿ ಅಭಿವೃದ್ಧಿ ಮತ್ತು ಸ್ಮಾರಕ ಕೇಂದ್ರ ಸ್ಥಾಪನೆ ಸಂಬಂಧ ತಲಾ 100 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
'ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ಹುಟ್ಟೂರು ಅಭಿವೃದ್ಧಿಗೆ ತಲಾ 100 ಕೋಟಿ ಅನುದಾನ'
ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಮತ್ತು ಆದಿ ಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮಿ ಅವರ ಹುಟ್ಟೂರಿನಲ್ಲಿ ಅಭಿವೃದ್ಧಿ ಮತ್ತು ಸ್ಮಾರಕ ಕೇಂದ್ರ ಸ್ಥಾಪನೆ ಸಂಬಂಧ ತಲಾ 100 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಈ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ವೀರಾಪುರ ಮತ್ತು ಬಾಣಂದೂರು ಗ್ರಾಮಗಳು ಮಹಾಪುರುಷರು ಜನ್ಮ ತಾಳಿದ ಗ್ರಾಮಗಳು. ಸಿದ್ದಗಂಗಾ ಸ್ವಾಮೀಜಿ ಜನಿಸಿದ ವೀರಾಪುರ ಮತ್ತು ಆದಿ ಚುಂಚನಗಿರಿ ಸ್ವಾಮೀಜಿಯ ಜನ್ಮಸ್ಥಳ ಬಾಣಂದೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಸಭೆಯಲ್ಲಿ ಎರಡು ಗ್ರಾಮಗಳ ಅಭಿವೃದ್ಧಿ ಸಂಬಂಧ ಸಮಗ್ರ ಯೋಜನಾ ವರದಿಯ ಕುರಿತು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ವೀರಾಪುರ ಗ್ರಾಮದ ಅಭಿವೃದ್ಧಿಯ ಕುರಿತ ವರದಿಯು ಸಮಾಧಾನ ತಂದಿದೆ. ಆದರೆ, ಬಾಣಂದೂರು ಗ್ರಾಮದ ಅಭಿವೃದ್ಧಿಯ ವರದಿ ಸಮಾಧಾನಕರವಾಗಿಲ್ಲ. ಮತ್ತೊಮ್ಮೆ ಅವಲೋಕನ ನಡೆಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಎರಡು ಗ್ರಾಮಗಳ ವರದಿಯನ್ನು ಸಿಎಂ ಮುಂದಿಟ್ಟು ಚರ್ಚಿಸಿ ಅಂತಿಮಗೊಳಿಸಲಾಗುವುದು. ಗ್ರಾಮಗಳ ರಸ್ತೆ, ಶಾಲೆ, ಸಮುದಾಯ ಭವನ ಸೇರಿದಂತೆ ವಿಶ್ವ ಆಕರ್ಷಣೀಯ ಸ್ಥಳವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರತಿಮೆಗಳನ್ನು ಸಹ ನಿರ್ಮಿಸಲಾಗುವುದು ಎಂದು ವಿವರಿಸಿದರು.