ಕರ್ನಾಟಕ

karnataka

ETV Bharat / state

ಶೇ.100 ರಷ್ಟು ನಷ್ಟಕ್ಕೊಳಗಾದ ಏಕೈಕ ಇಲಾಖೆ ಪ್ರವಾಸೋದ್ಯಮ: ಸಚಿವ ಸಿ.ಟಿ.ರವಿ

ಪ್ರವಾಸೋದ್ಯಮ ಇಲಾಖೆಗೆ 250 ಕೋಟಿಗೂ ಹೆಚ್ಚು ಆದಾಯ ನಷ್ಟವಾಗಿದೆ. ಸದ್ಯ ರಾಜ್ಯದ ಪ್ರವಾಸಿ ತಾಣಗಳು ಸುರಕ್ಷಿತವಾಗಿದ್ದು ಇದಕ್ಕೆ ಸಂಬಂಧಪಟ್ಟ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

Minister C.T. Ravi
ಸಚಿವ ಸಿ.ಟಿ. ರವಿ

By

Published : Jun 6, 2020, 5:35 PM IST

ಬೆಂಗಳೂರು: ಲಾಕ್​ಡೌನ್ ಸಂದರ್ಭದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು ಸಾಕಷ್ಟು ನಷ್ಟ ಅನುಭವಿಸಿದ್ದು, ಶೇ.100ರಷ್ಟು ನಷ್ಟ ಅನುಭವಿಸಿದೆ ಏಕೈಕ ಇಲಾಖೆ ಪ್ರವಾಸೋದ್ಯಮ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಸಚಿವ ಸಿ.ಟಿ. ರವಿ

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಾಯವಿಲ್ಲದೆ ಸರ್ಕಾರಕ್ಕೆ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಪ್ರವಾಸೋದ್ಯಮ ಕೂಡ ಸಾಕಷ್ಟು ಸಮಸ್ಯೆಗೆ ಸಿಲುಕಿದೆ. ಈ ವಿಚಾರವಾಗಿಯೇ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಡಿಸಿಎಂ ಲಕ್ಷ್ಮಣ ಸವದಿ ಅವರೊಂದಿಗೆ ಇಲಾಖೆಯ ಸಭೆ ನಡೆಸಿದ್ದೇವೆ.‌ ಇದರಲ್ಲಿ ಹಣಕಾಸು ಇಲಾಖೆ ಸಾರಿಗೆ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಒಟ್ಟಾರೆಯಾಗಿ ಪ್ರವಾಸೋದ್ಯಮ ಇಲಾಖೆಗೆ 250 ಕೋಟಿಗೂ ಹೆಚ್ಚು ಆದಾಯ ನಷ್ಟ ಆಗಿದೆ. ಸುಮಾರು 35 ಲಕ್ಷ ಮಂದಿ ಇದನ್ನು ಅವಲಂಬಿಸಿದ್ದಾರೆ. ಸದ್ಯ ರಾಜ್ಯದ ಪ್ರವಾಸಿ ತಾಣಗಳು ಸುರಕ್ಷಿತವಾಗಿದ್ದು ಇದಕ್ಕೆ ಸಂಬಂಧಪಟ್ಟ ಮುಂಜಾಗ್ರತ ಕ್ರಮವನ್ನು ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಪ್ರವಾಸಿ ತಾಣಗಳ ಭೇಟಿಗೆ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

ಜೂ. 8ರಿಂದ ಹೋಟೆಲ್ ಹಾಗೂ ಕೆಲ ಪ್ರವಾಸಿ ತಾಣಗಳನ್ನು ಒಂದಷ್ಟು ನಿಬಂಧನೆಗಳೊಂದಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಪ್ರವಾಸಿ ವಾಹನಗಳಿಗೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.100ರಷ್ಟು ವಾಹನ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದ್ದು, ಮುಂದುವರಿಸುವಂತೆ ಅವರು ಮನವಿ ಮಾಡಿದ್ದರು. ಇದರಿಂದಾಗಿ ಈ ತಿಂಗಳು ಶೇ. 50 ರಷ್ಟು ವಾಹನ ತೆರಿಗೆ ಕಡಿತ ಮಾಡಲು ನಿರ್ಧಾರ ಮಾಡಿದ್ದೇವೆ. ಕರ್ನಾಟಕಕ್ಕೆ ಪ್ರವೇಶ ಮಾಡುವ ದಕ್ಷಿಣ ರಾಜ್ಯಗಳ ವಾಹನಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ ಅವರು ಇತ್ತ ಬರುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಗೋವಾ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಜೊತೆಗೆ ಸಹ ಒಪ್ಪಂದ ಮಾಡಿಕೊಂಡು ಪ್ರವಾಸೋದ್ಯಮ ಪ್ರಗತಿಗೆ ಯೋಜನೆ ರೂಪಿಸಲು ನಿರ್ಧರಿಸಿದ್ದೇವೆ ಎಂದರು.

ಇನ್ನು ಪ್ರವೇಶ ತೆರಿಗೆ ರದ್ದಾಗಿರುವುದರಿಂದ ಅಕ್ಕಪಕ್ಕದ ರಾಜ್ಯಗಳು ಸುಗಮವಾಗಿ ಕರ್ನಾಟಕಕ್ಕೆ ಬಂದು ತೆರಳಲು ಅನುಕೂಲ ಆಗಲಿದೆ. ಪ್ರವಾಸೋದ್ಯಮ ಚಟುವಟಿಕೆ ಸುಧಾರಿಸಲು ಹಾಗೂ ಇಲ್ಲಿ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ. ಪರೋಕ್ಷ ತೆರಿಗೆ ಮೂಲಕ ರಾಜ್ಯಕ್ಕಾಗುವ ನಷ್ಟವನ್ನು ತುಂಬಿಕೊಳ್ಳಬಹುದು ಎಂಬ ಸಲಹೆಯನ್ನು ನಾವು ಸರ್ಕಾರಕ್ಕೆ ನೀಡಿದ್ದೇವೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಉಳಿದ ರಾಜ್ಯಗಳ ಜೊತೆ ಸಮಾಲೋಚಿಸಿ ಅದೇ ಮಾದರಿಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಪ್ರಿಯಾಂಕ ಖರ್ಗೆ ಸಲಹೆ ಸ್ವೀಕಾರ:

ಹಿಂದಿನ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಧಾರ್ಮಿಕ ಪ್ರವಾಸೋದ್ಯಮ ಹಾಗೂ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ನಡೆಯುವ ಚಿತ್ರೀಕರಣವನ್ನು ಕರ್ನಾಟಕದತ್ತ ಸೆಳೆಯುವ ಸಲಹೆಯನ್ನು ನೀಡಿದ್ದಾರೆ. ಇದಕ್ಕೆ ತಕ್ಷಣಕ್ಕೆ ತೀರ್ಥಯಾತ್ರೆ ಯೋಜನೆಯನ್ನು ಆರಂಭಿಸಲಿದ್ದೇವೆ. ಇದಕ್ಕೆ ಕೆಎಸ್ಟಿಡಿಸಿ ನೇತೃತ್ವ ನೀಡಲಿದ್ದೇವೆ. ಉಳಿದಂತೆ ವಿದೇಶ ಹಾಗೂ ಬೇರೆ ರಾಜ್ಯದಲ್ಲಿ ನಡೆಯುವ ಸಿನಿಮಾ ಚಿತ್ರೀಕರಣವನ್ನು ಕರ್ನಾಟಕದಲ್ಲಿ ನಡೆಸಲು ಅವಕಾಶ ನೀಡುವ ವಿಚಾರದಲ್ಲಿ ಜಂಗಲ್ ಲಾಡ್ಜಸ್ ಇಲಾಖೆ ಜೊತೆ ಚರ್ಚಿಸಿದ್ದು ಆದಷ್ಟು ಶೀಘ್ರ ಇದಕ್ಕೊಂದು ವಾತಾವರಣ ರಚಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ:

ಬೇರೆ ಬೇರೆ ಮುಖಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆದಿದೆ. ಇದರ ಭಾಗವಾಗಿ ಕೊಪ್ಪಳ ಸಮೀಪದ ಬಹದ್ದೂರ್ ಗ್ರಾಮದಲ್ಲಿ ಬಂಜಾರ ಹೆರಿಟೇಜ್ ವಿಲೇಜ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಬಂಜಾರ ಅಭಿವೃದ್ಧಿ ನಿಗಮ ಮತ್ತು ಕೆಎಸ್ಟಿಡಿಸಿ ಸಹಯೋಗದಲ್ಲಿ ಯೋಜನೆ ಸಾಕಾರಗೊಳ್ಳಲಿದೆ ಜೊತೆಗೆ ಆದಿವಾಸಿ ಕಲ್ಚರಲ್ ಹೆರಿಟೇಜ ರಾಮನಗರದ ಜಾನಪದ ಲೋಕದಲ್ಲಿ ಸ್ಥಾಪನೆ ಮಾಡಲು ತೀರ್ಮಾನಿಸಿದ್ದೇವೆ. ಕೃಷಿ ಪ್ರವಾಸೋದ್ಯಮದ ವಿಚಾರವಾಗಿಯೂ ಮಾತುಕತೆ ನಡೆದಿದ್ದು, ಇದರ ಸಿದ್ಧತಾ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ABOUT THE AUTHOR

...view details