ಬೆಂಗಳೂರು :ರಾಜ್ಯದಲ್ಲಿ ಈ ಬಾರಿ ಚುನಾವಣಾ ಅಕ್ರಮಗಳು ಜೋರಾಗೆ ನಡೆಯುತ್ತಿವೆ. ಚುನಾವಣೆಗೆ ಇನ್ನು 12 ದಿನಗಳು ಬಾಕಿ ಇರುವಾಗಲೇ ಬರೋಬ್ಬರಿ 302 ಕೋಟಿ ರೂ. ಅಕ್ರಮ ನಗದು, ಮದ್ಯ, ಉಡುಗೊರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.
ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಈವರೆಗೆ ಚುನಾವಣಾ ಆಯೋಗ ಸುಮಾರು 302.78 ಕೋಟಿ ರೂ. ಮೌಲ್ಯದ ನಗದು, ಮದ್ಯ ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಇದೇ ಅವಧಿಯಲ್ಲಿ 115 ಕೋಟಿ ರೂ. ಅಕ್ರಮ ನಗದು, ಮದ್ಯ, ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಈಗಾಗಲೇ ಒಟ್ಟು 300 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 117 ಕೋಟಿ ರೂ. ಹೆಚ್ಚುವರಿ ಜಪ್ತಿ ಮಾಡಲಾಗಿದೆ. ಸುಮಾರು 68% ಹೆಚ್ಚಿನ ಮೊತ್ತದ ಕುರುಡು ಕಾಂಚಾಣವನ್ನು ಜಪ್ತಿ ಮಾಡಲಾಗಿದೆ.
ಈವರೆಗೆ ಚುನಾವಣಾ ಆಯೋಗ, ಐಟಿ, ಪೊಲೀಸ್ ಇಲಾಖೆ, ಕಣ್ಗಾವಲು ಪಡೆ ಒಟ್ಟು 109.14 ಕೋಟಿ ರೂ. ಮೌಲ್ಯದ ನಗದನ್ನು ಜಪ್ತಿ ಮಾಡಿದೆ. 22.14 ಕೋಟಿ ರೂ. ಮೊತ್ತದ ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈವರೆಗೆ ಒಟ್ಟು 70.70 ಕೋಟಿ ಮೌಲ್ಯದ 19,10,746 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 18.29 ಕೋಟಿ ಮೌಲ್ಯದ 1,438 ಕೆ.ಜಿ. ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಈವರೆಗೆ ಒಟ್ಟು 76.05 ಕೋಟಿ ರೂ. ಬಂಗಾರ ಜಪ್ತಿ ಮಾಡಿದ್ದರೆ, 4.44 ಕೋಟಿ ರೂ.ಮೌಲ್ಯದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಒಟ್ಟು 2,288 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ.