ಬೆಂಗಳೂರು:ರಾಜ್ಯಸಭೆಗೆ ಇಂದು ನಾಮಪತ್ರ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಟ್ಟು ಆಸ್ತಿ 15 ಕೋಟಿಗೂ ಮೀರಿದೆ.
ಖರ್ಗೆ ಕುಟುಂಬದಲ್ಲಿ ಅವರ ಪತ್ನಿ ರಾಧಾಬಾಯಿ ಅವರೇ ಶ್ರೀಮಂತೆ. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಹೆಚ್ಚು ಆಸ್ತಿ ಅವರ ಪತ್ನಿಯೇ ಹೊಂದಿದ್ದಾರೆ.
ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಕುಟುಂಬ ಮೂಲದಿಂದ ಬಂದ ಒಟ್ಟು 6.20 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇದೇ ಗ್ರಾಮದಲ್ಲಿ ಇವರು ಒಟ್ಟು 25 ಎಕರೆ ಕೃಷಿಭೂಮಿ ಕೂಡ ಹೊಂದಿದ್ದಾರೆ.
ಗುಂಡಗುರ್ತಿಯಲ್ಲಿ ಖರ್ಗೆ ಹೆಸರಿನಲ್ಲಿ 1.08 ಎಕರೆ ಕೃಷಿಯೇತರ ಭೂಮಿ ಇದ್ದರೆ, ಬೆಂಗಳೂರಿನ ಕಮಿಷನರೇಟ್ ರಸ್ತೆಯಲ್ಲಿ 1.79 ಕೋಟಿ ರೂ. ಮೌಲ್ಯದ ವಾಣಿಜ್ಯ ಆಸ್ತಿಗೆ ಖರ್ಗೆ ವಾರಸುದಾರರು.
ಪತ್ನಿ ರಾಧಾ ಭಾಯಿ ಹೆಸರಿನಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿ 1.17 ಕೋಟಿ ರೂ. ಮೌಲ್ಯದ ವಾಣಿಜ್ಯ ಆಸ್ತಿ ಹೊಂದಿದ್ದು, ಸದಾಶಿವನಗರದಲ್ಲಿ ಪತಿ- ಪತ್ನಿ ಜಂಟಿ ಪಾಲುದಾರಿಕೆಯಲ್ಲಿ ತಲಾ 1.23 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಬೆಂಗಳೂರಿನ ಮಠದಹಳ್ಳಿಯಲ್ಲಿ ಪತ್ನಿ ಹೆಸರಿನಲ್ಲಿ 1.17 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಆರ್‌ಎಂವಿ 2ನೇ ಹಂತದಲ್ಲಿ 4.83 ಕೋಟಿ ರೂ. ಮೌಲ್ಯದ ಮನೆ ಇದೆ. ಕಲಬುರಗಿ ಬಸವನಗರದಲ್ಲಿ 46.35 ಲಕ್ಷ ರೂ. ಮೌಲ್ಯದ ಮನೆಯನ್ನೂ ಹೊಂದಿದ್ದಾರೆ.
ಉಳಿದ ವಿವರ: ಖರ್ಗೆ ಅವರ ಸ್ವಂತ ಹೆಸರಿನಲ್ಲಿ 7,01,18,724 ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದ್ದು, ಪತ್ನಿ ರಾಧಾ ಭಾಯಿ ಹೆಸರಿನಲ್ಲಿ 8,47,56,545 ರೂ. ಮೌಲ್ಯದ ಹಾಗೂ ಅವಿಭಕ್ತ ಕುಟುಂಬದ ಸದಸ್ಯರಾಗಿ ಖರ್ಗೆ ಅವರು 83.95 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ಖರ್ಗೆ ಅವರ ಬಳಿ ನಗದು ಸೇರಿ ನಾನಾ ಉಳಿತಾಯ ಖಾತೆ, ಠೇವಣಿ, ಬಾಂಡ್‌ನಲ್ಲಿ ಒಟ್ಟು 2,82,20,805 ರೂ. ಇದ್ದು, 10.71 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಜತೆಗೆ, ಇವರಿಗೆ 10 ಲಕ್ಷ ರೂ. ಸಾಲವಿದೆ. ಇನ್ನು ರಾಧಾ ಭಾಯಿ ಅವರ ಬಳಿ 81,29,618 ರೂ. ಹಣವಿದ್ದು, 33.81 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ಇನ್ನು ಇವರು ವಾಣಿಜ್ಯ ಆಸ್ತಿ ಬಾಡಿಗೆ ಮುಂಗಡ ಸೇರಿ ಒಟ್ಟು 13.75 ಲಕ್ಷ ರೂ. ಸಾಲ ಹೊಂದಿದ್ದಾರೆ. ಈ ಮಾಹಿತಿಯನ್ನು ಇಂದು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.