ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಡಿಸಿಎಂಗಳ ಹುದ್ದೆ ಸೃಷ್ಟಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸಚಿವ ಕೆ.ಎನ್ ರಾಜಣ್ಣರ ಮೂವರು ಡಿಸಿಎಂ ಬೇಡಿಕೆಗೆ ದನಿಗೂಡಿಸಿರುವ ಶಾಸಕ ಬಸವರಾಜ ರಾಯರೆಡ್ಡಿ, ರಾಜ್ಯಕ್ಕೆ ಇನ್ನೂ ಐವರು ಡಿಸಿಎಂಗಳ ಅಗತ್ಯತೆ ಇದೆ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಡಿಕೆಶಿ ಸೇರಿ ಆರು ಡಿಸಿಎಂಗಳ ಅವಶ್ಯಕತೆ ಇದೆ. ಸಚಿವ ಕೆ.ಎನ್.ರಾಜಣ್ಣ ಹೇಳಿರುವುದು ಸರಿಯಾಗಿದೆ. ರಾಜ್ಯಕ್ಕೆ ಇನ್ನೂ ಐವರು ಡಿಸಿಎಂಗಳ ಅವಶ್ಯಕತೆ ಇದೆ. ಡಿಕೆಶಿ ಸೇರಿ ಆರು ಡಿಸಿಎಂಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಇನ್ನೂ ಐವರು ಡಿಸಿಎಂಗಳ ಹುದ್ದೆ ಸೃಷ್ಟಿ ಮಾಡಬೇಕು. ಡಿ.ಕೆ.ಶಿವಕುಮಾರ್ ಕೂಡ ಹಿರಿಯ ನಾಯಕರೇ. ಆದರೆ ಚುನಾವಣೆ ದೃಷ್ಟಿಯಿಂದ ಇದು ಅನಿವಾರ್ಯ. ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ವರಿಷ್ಠರು ಗಮನಹರಿಸಬೇಕು. ಪ್ರಾದೇಶಿಕವಾರು, ಸಮುದಾಯವಾರು, ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿಸಬೇಕು. ಅಲ್ಪಸಂಖ್ಯಾತರ ಸಮುದಾಯದಿಂದ, ಮಹಿಳಾ ಡಿಸಿಎಂ, ಲಿಂಗಾಯತ ಸಮುದಾಯ, ಎಸ್ ಸಿ, ಎಸ್ ಟಿ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಬೇಕು. ಇದು ಉತ್ತಮ ಆಡಳಿತ ಕೊಡಲು ನೆರವಾಗುತ್ತದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ. ಈ ತೀರ್ಮಾನ ಹೈಕಮಾಂಡ್ಗೆ ಬಿಟ್ಟಿದ್ದು ಮತ್ತು ಸಿಎಂ ಸಿದ್ದರಾಮಯ್ಯಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ಕೆ.ಎನ್. ರಾಜಣ್ಣ ವಿರುದ್ಧ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಬಳಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಹಿರಿಯ ಕಾಂಗ್ರೆಸ್ ಮುಖಂಡ ರಾಯರೆಡ್ಡಿ ದನಿಗೂಡಿಸಿದ್ದಾರೆ. ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿಗೆ ಈಗಾಗಲೇ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ದರ್ಶನಾಪುರ ಸೇರಿ ಕೆಲವರು ಬೆಂಬಲ ಸೂಚಿಸಿದ್ದಾರೆ.