ಬೆಂಗಳೂರು:ಹೆಂಡತಿ ಹಾಗೂ ಅತ್ತೆಯ ಜತೆ ಗಲಾಟೆ ಸಹಿಸದೆ ದೂರವಾಗಿದ್ದ ಮೊದಲ ಗಂಡನನ್ನು ಎರಡನೇ ಗಂಡ ಕೊಲೆ ಮಾಡಿರುವ ಘಟನೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದರಾಜು ಕೊಲೆಯಾದ ದುರ್ದೈವಿ. ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಕಳೆದ ರಾತ್ರಿ ಘಟನೆ ನಡೆದಿದೆ. ಎರಡನೇ ಗಂಡ ಲಕ್ಷ್ಮಣ್ ಹಾಗೂ ಸಹಚರರಿಂದ ಕೊಲೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿರುವುದಾಗಿ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಹರೀಶ್ ಪಾಂಡೆ, ದಕ್ಷಿಣ ವಿಭಾಗ ಡಿಸಿಪಿ ಮಳವಳ್ಳಿ ಮೂಲದ ಸಿದ್ದರಾಜು ಕಳೆದ ಏಳು ವರ್ಷಗಳ ಹಿಂದೆ ಲತಾ ಎಂಬುವವರ ಜೊತೆ ಮದುವೆಯಾಗಿದ್ದ. ವಿವಾಹವಾಗಿ 6 ತಿಂಗಳು ಕಳೆಯುವಷ್ಟರಲ್ಲಿ ಹೆಂಡತಿಯಿಂದ ಸಿದ್ದರಾಜು ದೂರವಾಗಿದ್ದಾನೆ. ಒಂಟಿಯಾದ ಮಹಿಳೆಯನ್ನು ಲಕ್ಷ್ಮಣ್ ಎಂಬಾತ ಮದುವೆಯಾಗಿದ್ದ.
ಪತ್ನಿಯಿಂದ ದೂರವಾಗಿದ್ದ ಸಿದ್ದರಾಜು ಗಾಂಧಿ ಬಜಾರ್ ಬಳಿಯ ಲಾರಿ ಸ್ಟ್ಯಾಂಡ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಬೆಳೆಸಿಕೊಂಡಿದ್ದ ಈತ ಗಾಂಧಿ ಬಜಾರ್ನಲ್ಲಿ ಹೂ ಮಾರುತ್ತಿದ್ದ ಅತ್ತೆ ಜೊತೆ ಜಗಳವಾಡುತ್ತಿದ್ದ. ಹಲವು ದಿನಗಳಿಂದ ಅತ್ತೆ ಬಳಿ ಹೆಂಡತಿಯ ವಿಷಯವಾಗಿ ಬೈಯುತ್ತಿದ್ದ.
ವಿಷಯ ತಿಳಿದ ಎರಡನೇ ಗಂಡ ಲಕ್ಷ್ಮಣ್ ತನ್ನ ಸಹಚರರನ್ನು ಕರೆಸಿಕೊಂಡು ನಿನ್ನೆ ರಾತ್ರಿ ನೆಟ್ಟಕಲ್ಲಪ್ಪ ವೃತ್ತದ ಬಳಿ ಮದ್ಯಪಾನ ಮಾಡಿಸಿದ್ದಾರೆ. ಬಳಿಕ ಚಾಕುವಿನಿಂದ ಸಿದ್ದರಾಜು ಎದೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.