ಆನೇಕಲ್: ಕನ್ನಡ ನಾಮಫಲಕ ಕಡ್ಡಾಯ ಆಗ್ರಹಿಸಿ ಕೆಲ ಅಂಗಡಿ ಬೋರ್ಡ್ಗಳ ತೆರವಿಗೆ ಯತ್ನಿಸಿದ ನಾರಾಯಣಗೌಡ ಅವರ ಬಂಧನವನ್ನು ಖಂಡಿಸಿ ಕರವೇ ಶಿವರಾಮೇಗೌಡ ಬಣದವರು ಶುಕ್ರವಾರ ಸಂಜೆ ಆನೇಕಲ್ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. "ನಾರಾಯಣಗೌಡ ಸೇರಿ ಕನ್ನಡಿಗರನ್ನು ಬಿಡುಗಡೆ ಮಾಡದೇ ಇದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ" ಎಂದು ಕರವೇ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಎಚ್ಚರಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಲೋಕೇಶ್ ಗೌಡ, "ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎನ್ನುವುದು ಕನ್ನಡಿಗರ ಹೋರಾಟ. ಆದರೆ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ಹಿರಿಯ ಹೋರಾಟಗಾರ ನಾರಾಯಣ ಗೌಡ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದು ನಾಚಿಕೆಗೇಡಿನ ಸಂಗತಿ. ನಾನು ಕನ್ನಡಿಗ, ಕನ್ನಡಿಗರ ಪರ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಬಂದು ವ್ಯಾಪಾರ ಮಾಡುವವರು ಇಲ್ಲಿನ ಭಾಷೆಗೆ ಗೌರವ ಕೊಡದೇ ಇರುವುದರ ಬಗ್ಗೆ ಚಕಾರ ಎತ್ತಲು ತಾಕತ್ತು ಇಲ್ಲವೇ" ಎಂದು ಪ್ರಶ್ನಿಸಿದರು.