ಬೆಂಗಳೂರು: ಕೊರೊನಾ ಕಾಲಘಟ್ಟದಲ್ಲೂ ಯಶಸ್ವಿಯಾಗಿ ಹಲವು ಮುಖ್ಯ ಪರೀಕ್ಷೆಗಳನ್ನ ನಡೆಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಟಿಇಟಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ.
ನಾಳೆ 886 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಟಿಇಟಿ) ನಡೆಯಲಿದೆ. ಮೊದಲ ಪತ್ರಿಕೆಗೆ 74,977 ಮತ್ತು ಎರಡನೇ ಪತ್ರಿಕೆಗೆ 1,69,716 ಪರೀಕ್ಷಾರ್ಥಿಗಳು ಸೇರಿದಂತೆ ಒಟ್ಟಾರೆ 2,44,693 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.
ಕೊರೊನಾ ಹಿನ್ನೆಲೆ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸುಮಾರು ಎರಡು ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅಭ್ಯರ್ಥಿಗಳು ನೀಡಿರುವ ಕಾರಣವನ್ನು ಪರಿಶೀಲಿಸಿ ಬದಲಾವಣೆಗೆ ಅವಕಾಶ ಕಲ್ಪಿಸಿದೆ. ಕೊರೊನಾ ಸೋಂಕು ಇರುವ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕಿಂತ ಒಂದು ಗಂಟೆಯ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು.
ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಈ ಸಂಬಂಧ ಯಾವುದೇ ವಿನಾಯಿತಿಯೂ ಇರುವುದಿಲ್ಲ. ಕೊರೊನಾ ಪಾಸಿಟಿವ್ ಅಭ್ಯರ್ಥಿ ಸಂಚರಿಸಲು ಅದಕ್ಕಾಗಿ ನಿಗದಿ ಪಡಿಸಿದ ಆ್ಯಂಬುಲೆನ್ಸ್ ಬಳಕೆ ಮಾಡಿಕೊಳ್ಳಬೇಕು.
ಹೋಮ್ ಐಸೋಲೇಶನ್‌ನಲ್ಲಿರುವ ಅಭ್ಯರ್ಥಿ ಪರೀಕ್ಷೆ ಬರೆಯಲು ಇಚ್ಛಿಸಿದರೆ ಚಿಕಿತ್ಸೆ ನೀಡುತ್ತಿರುವ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಆಗ ಜಿಲ್ಲಾ ಕೊರೊನಾ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಅಭ್ಯರ್ಥಿಯ ಪಾಲಕರು ‘ಅಪಾಯ ಒಪ್ಪಿಗೆ’ ಪತ್ರವನ್ನು ಉಪನಿರ್ದೇಶಕರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.