ಬೆಂಗಳೂರು: ನಾಳೆಯಿಂದ ಎಲ್ಲಾ ಹೋಟೆಲ್ಗಳ ಕಿಚನ್ಗಳನ್ನು ಮಾತ್ರ ತೆರೆದಿಟ್ಟು, ತಿಂಡಿ, ತಿನಿಸುಗಳನ್ನು ಪಾರ್ಸಲ್ ಮಾಡಲು ಮಾತ್ರ ಅವಕಾಶ ಇರಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದ ಎಲ್ಲಾ ಪಾಲಿಕೆಗಳ ವ್ಯಾಪ್ತಿಯ ಹೋಟೆಲ್ಗಳಿಗೆ ಈ ನಿರ್ಬಂಧ ಅನ್ವಯವಾಗಲಿದೆ. ಹೋಟೆಲ್ ಮಾಲೀಕರು ಕೇವಲ ಕಿಚನ್ ತೆರೆದಿರಬೇಕು. ಗ್ರಾಹಕರಿಗೆ ಆಹಾರವನ್ನು ಪಾರ್ಸಲ್ ಮಾಡಿಕೊಡಬೇಕು. ಇದಕ್ಕೆ ಸಹಕರಿಸಬೇಕು. ನಾಳೆ ಸಂಜೆಯಿಂದ ಈ ನಿರ್ಬಂಧ ಜಾರಿಗೆ ಬರಲಿದೆ ಎಂದರು.
ಮಾರ್ಚ್ 31ರವರೆಗೆ ಬಾರ್, ಪಬ್, ಕ್ಲಬ್ಗಳನ್ನು ಯಾವುದನ್ನೂ ತೆರೆಯಕೂಡದು. ನಾಳೆ ಸಂಜೆಯಿಂದ ಇದು ಅನ್ವಯವಾಗಲಿದೆ. ಪ್ರಧಾನಿ ಜೊತೆ ಅರ್ಥಪೂರ್ಣ ಚರ್ಚೆ ಆಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. ಕೋವಿಡ್ -19 ಪ್ರಕರಣ ಹೆಚ್ಚುತ್ತಿದ್ದು, ಇದು ಎಚ್ಚರಿಕೆ ಗಂಟೆ ಎಂದು ಪಿಎಂ ತಿಳಿಸಿದ್ದಾರೆ.