ಬೆಂಗಳೂರು:ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಈಗಾಗ್ಲೇ ಪರೀಕ್ಷೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಪರೀಕ್ಷಾ ಅಕ್ರಮ ತಡೆಯಲು ಸಕಲ ರೀತಿಯಲ್ಲೂ ಬೋರ್ಡ್ ಸಜ್ಜಾಗಿದೆ.
2020ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ನಾಳೆಯಿಂದ ಆರಂಭವಾಗಿ ಮಾರ್ಚ್ 23ರವರೆಗೆ ನಡೆಯಲಿದೆ. ಈಗಾಗ್ಲೇ ಪರೀಕ್ಷೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರೋ ಪಿಯು ಬೋರ್ಡ್, ಅಕ್ರಮ ಹಾಗೂ ಪ್ರಶ್ನೆಪ್ರತಿಕೆ ಸೋರಿಕೆ ತಡೆಯಲು ತೀವ್ರ ನಿಗಾ ವಹಿಸಿದೆ. ಈ ಬಾರಿ ರಾಜ್ಯಾದ್ಯಂತ ಒಟ್ಟು 6 ಲಕ್ಷದ 40 ಸಾವಿರದ 674 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಎದುರಿಸಲಿದ್ದಾರೆ.
ಪಿಯು ಬೋರ್ಡ್ ನಿರ್ದೇಶಕರು ಎಂ. ಕನಗವಲ್ಲಿ ಈ ವರ್ಷ ಅಡಿಷನಲ್ ಶೀಟ್ ಕೊಡುವುದನ್ನು ರದ್ದು ಮಾಡಲಾಗಿದ್ದು, ಒಂದೇ ಬುಕ್ಲೇಟ್ ನೀಡಲಾಗುತ್ತಿದೆ. ಒಟ್ಟು 1016 ಪರೀಕ್ಷಾ ಕೇಂದ್ರಗಳಲ್ಲಿದ್ದು, ಅಕ್ರಮ ತಡೆಯಲು 2 ಸಾವಿರಕ್ಕೂ ಅಧಿಕ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಇನ್ನು ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪಿಯು ಬೋರ್ಡ್ ಆಯಾ ಕಾಲೇಜುಗಳಿಗೆ ಪ್ರವೇಶ ಪತ್ರ ಕಳುಹಿಸಿಕೊಟ್ಟಿದೆ.
ಇನ್ನು ಪರೀಕ್ಷಾ ಕೇಂದ್ರಕ್ಕೆ ಡಿಜಿಟಲ್ ವಾಚ್ ನಿಷೇಧಿಸಿದ್ದು, ಅನಲಾಗ್ ವಾಚ್ ಬಳಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಾಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶದ ಪ್ರವೇಶ ನಿಷೇಧಿಸಲಾಗಿದೆ.