ಕರ್ನಾಟಕ

karnataka

ETV Bharat / state

ಇಂದು ಕರ್ನಾಟಕ ಬಂದ್: ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್.. ಯಾವ ಸೇವೆ ಇರುತ್ತೆ, ಯಾವುದಿರಲ್ಲ?

Karnataka Bundh: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಸಂಬಂಧ ವಿವಿಧೆಡೆ ಸೂಕ್ತ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.

karnataka bundh
ಕರ್ನಾಟಕ ಬಂದ್

By ETV Bharat Karnataka Team

Published : Sep 28, 2023, 7:48 PM IST

Updated : Sep 29, 2023, 6:32 AM IST

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್​ಗೆ ಕರೆ ನೀಡಿದ ಬೆನ್ನಲ್ಲೇ ಇಂದು ಕರ್ನಾಟಕ ಬಂದ್​ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದು, ಬಹುತೇಕ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆ ಅಂಗಡಿ-ಮುಂಗಟ್ಟು, ಕೈಗಾರಿಕೆ ಹಾಗೂ ಸಿನಿಮಾ ಥಿಯೇಟರ್ ಸೇರಿದಂತೆ ಬಹುತೇಕ ಸೇವೆಗಳು ಸ್ತಬ್ಧವಾಗುವ ಸಾಧ್ಯತೆಯಿದೆ.

ಕಾವೇರಿ ವಿಚಾರವಾಗಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಮಂಡ್ಯ ಬಂದ್ ಸಹ ಯಶಸ್ವಿಯಾಗಿತ್ತು. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಇಂದು ಮಧ್ಯರಾತ್ರಿ 12 ರಿಂದ ನಾಳೆ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ವಿಧಿಸಿದ್ದಾರೆ. ಜೊತೆಗೆ ಕಮೀಷನರೇಟ್ ಹಾಗೂ ಜಿಲ್ಲಾ ಮಟ್ಟದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಏನಿರುತ್ತೆ ? ಏನಿರಲ್ಲ ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.

ಏನಿರುತ್ತೆ ? :ಔಷಧಿ ಮಳಿಗೆಗಳು, ಆಸ್ಪತ್ರೆಗಳು, ಬ್ಯಾಂಕ್​ಗಳು, ಮೆಟ್ರೋ ರೈಲು, ಪೆಟ್ರೋಲ್ ಬಂಕ್​ಗಳು, ಕೆಎಸ್ಆರ್​ಟಿಸಿ ಬಸ್, ಬಿಎಂಟಿಸಿ ಬಸ್ ಸೇವೆ ಇರಲಿದೆ.

ಏನಿರಲ್ಲ ? :ಆಟೋ, ಕ್ಯಾಬ್, ಓಲಾ- ಉಬರ್ ಕ್ಯಾಬ್, ಮಾಲ್​ಗಳು, ಕೆಲ ಖಾಸಗಿ ಬಸ್​ಗಳು, ಜಿಲ್ಲಾ ಕೇಂದ್ರದ ಪ್ರಮುಖ ಮಾರುಕಟ್ಟೆಗಳು, ಹೋಟೆಲ್​ಗಳು ಕೆಲ ಶಾಲಾ-ಕಾಲೇಜುಗಳು, ಗೂಡ್ಸ್ ವಾಹನಗಳು, ಆಭರಣ ಮಳಿಗೆಗಳು, ಚಿತ್ರಮಂದಿಗಳು, ಕೈಗಾರಿಕೆಗಳು, ಬೀದಿ ಬದಿ ಅಂಗಡಿಗಳು ಇರುವುದಿಲ್ಲ.

ಕರ್ನಾಟಕ ಬಂದ್ ಸಂಬಂಧ ಕಾವೇರಿ ಕಣಿವೆಯಲ್ಲಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ. ವಾಟಾಳ್ ಕರೆ ನೀಡಿರುವ ಬಂದ್​ಗೆ ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ, ಕನ್ನಡ ಸೇನೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನೂ ಬೆಂಗಳೂರಿನಲ್ಲಿ ಓಲಾ-ಉಬರ್ ಚಾಲಕ ಸಂಘವು ಬೆಂಬಲ ನೀಡಿದ್ದು, ಇವುಗಳ ಸೇವೆಗಳು ಇರುವುದಿಲ್ಲ. ಬಿಎಂಟಿಸಿ ಹಾಗೂ ಕೆಎಸ್ಆರ್​ಟಿಸಿ ಬಸ್ ಸಂಚಾರವಿರಲಿದ್ದು, ಪ್ರಯಾಣಿಕರ ಕೊರತೆಯಾದರೆ ಸೇವೆ ನೀಡಲು ಹಿಂದಕ್ಕೆ ಪಡೆಯಲು ಸಾರಿಗೆ ಸಂಸ್ಥೆಗಳು ಚಿಂತನೆ ನಡೆಸಿವೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆ :ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಸಂಘಟನೆಯು ಇಂದು ಬೆಳಗ್ಗೆ 11ರಿಂದ 1ಗಂಟೆವರೆಗೂ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಈ ವೇಳೆ ಸುಗಮ ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಚಳವಳಿಯಲ್ಲಿ ಸಂಘಟನೆ ಸಂಚಾಲಕರಾದ ಕುರುಬೂರು ಶಾಂತಕುಮಾರ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಸಂಘಟನೆಯ ಮುಖಂಡರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ :ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸಮರ್ಥವಾಗಿ ವರದಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಕರವೇ ಅಧ್ಯಕ್ಷ ಶಿವರಾಮೇಗೌಡ

Last Updated : Sep 29, 2023, 6:32 AM IST

ABOUT THE AUTHOR

...view details