ಬೆಂಗಳೂರು: ನಗರದ ವ್ಯಾಪ್ತಿಯ ಸ್ಲಂ ಪ್ರದೇಶದಲ್ಲಿರುವ ಬಡವರಿಗೆ ಬಿಬಿಎಂಪಿ ವತಿಯಿಂದ 2ರಿಂದ 3 ಲಕ್ಷ ಲೀಟರ್ ನಂದಿನಿ ಹಾಲನ್ನು ನಾಳೆಯಿಂದ ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನಾಳೆಯಿಂದ ಬೆಂಗಳೂರಿನ ಸ್ಲಂ ನಿವಾಸಿಗಳಿಗೆ ಉಚಿತ ಹಾಲು ವಿತರಣೆ: ಸಚಿವ ಅರ್.ಅಶೋಕ್ - Minister R.Ashok Statement
ನಾಳೆಯಿಂದ ಏಪ್ರಿಲ್ 14ರವರೆಗೆ ಬೆಂಗಳೂರಿನ ಎಲ್ಲಾ ಸ್ಲಂ ವಾರ್ಡ್ಗಳಲ್ಲಿ ಉಚಿತವಾಗಿ ಹಾಲು ವಿತರಿಸಲಾಗುವುದು ಎಂದು ಕಂದಾಯ ಸಚಿವ ಅರ್.ಶೋಕ್ ತಿಳಿಸಿದ್ದಾರೆ.
ಇಂದು ಬಿಬಿಎಂಪಿ ಕಚೇರಿಯಲ್ಲಿ CREDAI (ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಪದಾಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆಯಿಂದ ಏಪ್ರಿಲ್ 14ರವರೆಗೆ ಎಲ್ಲಾ ವಾರ್ಡ್ಗಳಲ್ಲಿ ಉಚಿತವಾಗಿ ಹಾಲು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ಈ ಕೆಲಸಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಕೊರೊನಾ ಭೀತಿಯಿಂದ ಕಟ್ಟಡ ಕಾರ್ಮಿಕರು ಗುಳೆ ಹೊರಟಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಬೆಂಗಳೂರಿನಲ್ಲಿರುವ ಯಾವ ಕಾರ್ಮಿಕರೂ ಬೇರೆ ಜಾಗಕ್ಕೆ ತೆರಳುವಂತಿಲ್ಲ. ಅಲ್ಲದೆ ಕಾರ್ಮಿಕರು ಇರುವ ಜಾಗದಲ್ಲೇ ಅವರಿಗೆ ಬೇಕಾದ ಅಗತ್ಯ ಸೇವೆ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಲು ನೋಡಲ್ ಅಧಿಕಾರಿಗಳ ನಿಯೋಜನೆ ಮಾಡುವಂತೆ ಸೂಚನೆ ನೀಡಲಾಗಿದೆ. ಯಾವ ಕಾರ್ಮಿಕರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಡೆವಲಪರ್ಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಹೊರ ರಾಜ್ಯ ಹಾಗೂ ನಮ್ಮ ರಾಜ್ಯದ 65,000 ಕಾರ್ಮಿಕರ ಪೈಕಿ 30,000ಕ್ಕೂ ಹೆಚ್ಚು ಕಾರ್ಮಿಕರು ವಾಸವಾಗಿದ್ದಾರೆ. ಅವರಿಗೆ ಇರುವ ಸ್ಥಳದಲ್ಲೇ ಎಲ್ಲಾ ವ್ಯವಸ್ಥೆ ಮಾಡಬೇಕು. ಜೊತೆಗೆ ಸಬ್ ಕಂಟ್ರಾಕ್ಟರ್ಗಳು ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಕಾರ್ಮಿಕರು ರಸ್ತೆಯಲ್ಲಿ ಓಡಾಡುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಬಂಧಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.