ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾದರೂ ಕರ್ತವ್ಯದಿಂದ ವಿಮುಖರಾಗದ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರೆಸಿದ್ದಾರೆ. ನಿರ್ಗಮನಕ್ಕೂ ಮುನ್ನ ಸಿಎಂ ನಾಳೆ ಸಿಟಿ ರೌಂಡ್ಸ್ ಮೂಲಕ ಮಹಾನಗರದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಸುಳಿವು ನೀಡಿದ್ದರೂ ಎಂದಿನಂತೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ನೀರಾವರಿ ನಿಗಮಗಳ ಆಡಳಿತ ಮಂಡಳಿ ಸಭೆ ನಡೆಸಿರುವ ಸಿಎಂ, ಸಂಜೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡರು.
ರಾಜಕೀಯ ವಿದ್ಯಮಾನಗಳ ನಡುವೆಯೂ ವಿರಮಿಸದ ಸಿಎಂ ಯಡಿಯೂರಪ್ಪ ಶುಕ್ರವಾರ ಬೆಂಗಳೂರು ನಗರ ಪ್ರದಕ್ಷಿಣೆ ಹಾಕಲಿದ್ದಾರೆ. ಆರು ತಿಂಗಳ ನಂತರ ಸಿಟಿ ರೌಂಡ್ಸ್ ಹಾಕಲಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಳು ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಲಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 930 ಕೋಟಿ ವೆಚ್ಚದಲ್ಲಿ 37 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಈಗಾಗಲೇ ಕೆಲವು ಪೂರ್ಣಗೊಂಡಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಲಿದ್ದಾರೆ. ಕೊರೊನಾ ಎರಡನೇ ಅಲೆಯ ಕಾರಣದಿಂದ ಕಾಮಗಾರಿಗಳು ಕೆಲ ಸಮಯ ಸ್ಥಗಿತಗೊಂಡು ಮತ್ತೆ ಪುನಾರಂಭಗೊಂಡಿದ್ದು, ಅವುಗಳ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.
ಓದಿ: ರಾಜಾಹುಲಿ ರಾಜೀನಾಮೆಗೆ ಹೆಚ್ಚು ಸಮಯ ನೀಡದ ಹೈಕಮಾಂಡ್: ತರಾತುರಿ ನಿರ್ಧಾರಕ್ಕೆ ಕಾರಣ?