ಬೆಂಗಳೂರು:ಇಂದು ರಾತ್ರಿ ನವದೆಹಲಿಗೆ ತೆರಳಿ ನೆರೆ ಹಾನಿ ಪರಿಹಾರ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸುವ ಜೊತೆಗೆ, ಸಂಪುಟ ವಿಸ್ತರಣೆ ಕರಿತು ವರಿಷ್ಠರ ಜೊತೆ ಚರ್ಚಿಸಿ ಅಂತಿಮಗೊಳಿಸಿಕೊಂಡು ಬರುತ್ತೇನೆ ಎಂದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಾಳೆ ಮೋದಿ ಭೇಟಿಯಾಗಲಿರುವ ಬಿಎಸ್ವೈ: ನೆರೆ ಪರಿಹಾರ, ಸಂಪುಟ ರಚನೆ ಕುರಿತು ಚರ್ಚೆ - ಸಿಎಂ ಬಿ.ಎಸ್.ಯಡಿಯೂರಪ್ಪ
ರಾಜ್ಯದಲ್ಲಿ ಆಗಿರುವ ಅತಿವೃಷ್ಟಿ ಹಾಗೂ ಸಂಪುಟ ರಚನೆ ಕುರಿತಾಗಿ ನಾಳೆ ದೆಹಲಿಗೆ ತೆರಳಲಿದ್ದೇನೆ ಎಂದು, ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ ಹತ್ತು ಗಂಟೆಗೆ ಪ್ರಧಾನಿ ಮೋದಿಯವರು ಭೇಟಿಗೆ ಸಮಯ ಕೊಟ್ಟಿದ್ದಾರೆ. ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ವಿಚಾರಗಳ ಬಗ್ಗೆ ಹಾಗು ನೆರೆ ಪರಿಹಾರ ವಿಚಾರವಾಗಿ ಪ್ರಧಾನಿ ಜೊತೆ ಚರ್ಚೆ ನಡೆಸುತ್ತೇವೆ. ಈ ವೇಳೆ ನಮ್ಮ ಕೇಂದ್ರದ ಸಚಿವರು ಕೂಡ ಜೊತೆಗಿರ್ತಾರೆ ಹಾಗೆಯೇ ಕೇಂದ್ರ ಸಚಿವರನ್ನೂ ಭೇಟಿ ಮಾಡಬೇಕಿದೆ ಎರಡು ದಿನ ಅಲ್ಲೇ ಇರುತ್ತೇನೆ ಎಂದರು.
ದೇಶದಲ್ಲಿ ಹಲವು ಕಡೆ ಅತಿವೃಷ್ಟಿ ಆಗಿದೆ ಮಹಾರಾಷ್ಟ್ರ, ಕೇರಳದಲ್ಲೂ ಪ್ರವಾಹ ಉಂಟಾಗಿದೆ. ಹಾಗಾಗಿ ನೆರೆ ಪರಿಹಾರ ಬರೋದು ತಡ ಆಗಬಹುದು ಎಂದು, ಪರಿಹಾರ ಹಣ ಬಿಡುಗಡೆ ವಿಳಂಬಕ್ಕೆ ಸಿಎಂ ವಿವರಣೆ ನೀಡಿದರು. ಇನ್ನು ವರಿಷ್ಠರ ಜೊತೆ ಸಚಿವ ಸಂಪುಟ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ, ಮೋದಿ ಭೇಟಿ ನಂತರ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ ಅನುಮತಿ ಪಡೆದುಕೊಳ್ಳುತ್ತೇನೆ ಎಂದರು.