ಕರ್ನಾಟಕ

karnataka

By

Published : May 26, 2021, 1:51 PM IST

ETV Bharat / state

ನಾಳೆ ಸಂಪುಟ ಸಭೆ : ಜಿಂದಾಲ್​ಗೆ ಭೂಮಿ ಪರಭಾರೆ ವಿಷಯ ಪ್ರಸ್ತಾಪ ಸಾಧ್ಯತೆ?

ಜನವರಿ ತಿಂಗಳಲ್ಲಿ ನಿರಾಣಿ ಅವರು ರೂಪಿಸಿದ ಖಾಸಗಿ ಕಾರ್ಯಕ್ರಮಕ್ಕೆಂದು ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ ಅವರು ಸಭೆಯಲ್ಲಿ‌ ನಿರಾಣಿ ಅವರನ್ನು‌ ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. ಇದಾದ ನಂತರ ಮೈಸೂರು ಪ್ರವಾಸದಲ್ಲಿದ್ದ ನಿರಾಣಿ ಅವರನ್ನು ಫೆಬ್ರವರಿ‌ 23 ರಂದು ದೆಹಲಿಗೆ ಕರೆಸಿಕೊಂಡಿದ್ದ ಅಮಿತ್ ಷಾ ಅವರು ಸುಮಾರು 25 ನಿಮಿಷಗಳ ಕಾಲ ಚರ್ಚಿಸಿದ್ದರು..

CM BSY
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು :ಕೊರೊನಾ ಎರಡನೇ ಅಲೆ ಸಂಕಷ್ಟದ ನಡುವೆಯೂ ಬಿಜೆಪಿ ಸರ್ಕಾರದಲ್ಲಿ ನಾಯಕತ್ವದ ಬದಲಾವಣೆ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸಿ ಬೇರೊಬ್ಬರನ್ನು ತಂದು ಕೂರಿಸಲು ಬಿಜೆಪಿ ಹೈಕಮಾಂಡ್​​​ನಲ್ಲಿ ಚರ್ಚೆಗಳು ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬಳ್ಳಾರಿ ಜಿಲ್ಲೆ ತೋರಣಗಲ್​​ನಲ್ಲಿರುವ ಜಿಂದಾಲ್ ಕಂಪನಿಗೆ 3,677 ಎಕರೆ ಭೂಮಿ ಪರಭಾರೆ ಮಾಡಿರುವುದು ಬಿಜೆಪಿ ವಲಯವೂ ಸೇರಿದಂತೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾಗಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

ಕಾರಣ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಇದೇ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡಲು ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಆಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ವಿರೋಧ ವ್ಯಕ್ತಪಡಿಸಿ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿತ್ತು.

ಆದರೆ, ಈಗ ಬಿಜೆಪಿ ಸರ್ಕಾರ ಬಂದ ನಂತರ 3,677 ಎಕರೆ ಭೂಮಿಯನ್ನು ಜಿಂದಾಲ್​​ಗೆ ಪರಭಾರೆ ಮಾಡಲು ತೀರ್ಮಾನಿಸಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಭೂಮಿ ಕೊಡುವ ಬಗ್ಗೆ ಒಪ್ಪಿಗೆ ಸಹ ನೀಡಲಾಗಿದೆ. ಈಗ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಅದರಲ್ಲೂ ಆಡಳಿತ ಪಕ್ಷದ ಕೆಲವು ಸಚಿವರು ಹಾಗೂ ಶಾಸಕರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾಳಿನ ಸಂಪುಟ ಸಭೆಯಲ್ಲಿ ಚರ್ಚೆ?:ಜಿಂದಾಲ್​​ಗೆ ಭೂಮಿ ನೀಡುವ ಕುರಿತು ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಶಾಸಕರು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಶಾಸಕಾಂಗ ಸಭೆಗೆ ಒತ್ತಡ :ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ, ಕೋವಿಡ್ ವಿಷಯದಲ್ಲಿ ಆಗಿರುವ ಸಮಸ್ಯೆಗಳೂ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ತಕ್ಷಣ ಶಾಸಕಾಂಗ ಸಭೆ ಕರೆಯುವಂತೆ ಹಲವು ಶಾಸಕರು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

ಲಾಕ್​​ಡೌನ್ ಮುಗಿದ ನಂತರ ಶಾಸಕಾಂಗ ಸಭೆ ಕರೆಯುವ ಸಾಧ್ಯತೆಯಿದೆ. ಜಿಂದಾಲ್​​ಗೆ ಭೂಮಿ ಪರಭಾರೆ ಮಾಡುವ ಕಾರಣಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಬಿಜೆಪಿಯ ಕೆಲ ಶಾಸಕರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೈತಿಕವಾಗಿ ಒಂದು ವಿಚಾರದ ಬಗ್ಗೆ ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿ, ನಮ್ಮದೇ ಸರ್ಕಾರ ಬಂದಾಗ ಪರಭಾರೆ ಮಾಡಿದ್ದು ತಪ್ಪು. ಹಾಗಾಗಿ, ಸಂಪುಟದ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು. ಪರಭಾರೆ ಆದೇಶವನ್ನು ರದ್ದುಪಡಿಸಬೇಕೆಂಬುದು ಶಾಸಕರ ಅಭಿಪ್ರಾಯವಾಗಿದೆ.

ಸಿಎಂ ಬದಲಾವಣೆ ಬಗ್ಗೆ ಚರ್ಚೆ?:ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಆರಂಭವಾದ ಬೆನ್ನಲ್ಲೇ ದೆಹಲಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನದಲ್ಲಿ ಉಳಿದುಕೊಳ್ಳದೆ ಹೋಟೆಲ್‌ನಲ್ಲಿ ತಂಗಿದ್ದಾರೆ.

ವೈಯಕ್ತಿಕ ಕೆಲಸಕ್ಕೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಅವರು, ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೊಬ್ಬರನ್ನು ತಂದು ಕೂರಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎಂಬ ಮಾತುಗಳ ಬೆನ್ನಲ್ಲೇ ಹಿರಿಯ ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಕೆಲ ದಿನಗಳ ಹಿಂದೆ ಪಕ್ಷದ ಪ್ರಭಾವಿ ನಾಯಕ ಅಮಿತ್ ಷಾ ಅವರು ನಿರಾಣಿ ಅವರನ್ನು ಕರೆಸಿಕೊಂಡು‌ ಮಹತ್ವದ ಮಾತುಕತೆ ನಡೆಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಆರ್​ಎಸ್​​ಎಸ್ ಪ್ರಮುಖರ ಸಮ್ಮುಖದಲ್ಲಿ ಮುರುಗೇಶ್ ನಿರಾಣಿ ಅವರ ಜತೆ ಅಮಿತ್ ಷಾ ಅವರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಅಗತ್ಯ ಸಂದರ್ಭದಲ್ಲಿ ಪಕ್ಷ ನೀಡುವ ಸೂಚನೆಗಳನ್ನು ಪಾಲಿಸಲು ಸಜ್ಜಾಗಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ನಿರಾಣಿ ಹೆಸರು ಮುನ್ನೆಲೆಗೆ :ಉನ್ನತ ಮೂಲಗಳ ಪ್ರಕಾರ, ಜನವರಿ ತಿಂಗಳಿನಿಂದಲೇ ಮುರುಗೇಶ್ ನಿರಾಣಿ ಅವರೊಂದಿಗೆ ಸತತ ಸಂಪರ್ಕದಲ್ಲಿರುವ ಅಮಿತ್ ಷಾ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಜನವರಿ ತಿಂಗಳಲ್ಲಿ ನಿರಾಣಿ ಅವರು ರೂಪಿಸಿದ ಖಾಸಗಿ ಕಾರ್ಯಕ್ರಮಕ್ಕೆಂದು ಕರ್ನಾಟಕಕ್ಕೆ ಬಂದಿದ್ದ ಅಮಿತ್ ಷಾ ಅವರು ಸಭೆಯಲ್ಲಿ‌ ನಿರಾಣಿ ಅವರನ್ನು‌ ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. ಇದಾದ ನಂತರ ಮೈಸೂರು ಪ್ರವಾಸದಲ್ಲಿದ್ದ ನಿರಾಣಿ ಅವರನ್ನು ಫೆಬ್ರವರಿ‌ 23 ರಂದು ದೆಹಲಿಗೆ ಕರೆಸಿಕೊಂಡಿದ್ದ ಅಮಿತ್ ಷಾ ಅವರು ಸುಮಾರು 25 ನಿಮಿಷಗಳ ಕಾಲ ಚರ್ಚಿಸಿದ್ದರು.

ಇದಾದ ನಂತರ ಏಪ್ರಿಲ್ 24 ರಂದು ತುರ್ತು ಬುಲಾವ್ ನೀಡಿ‌ ಮುರುಗೇಶ್ ನಿರಾಣಿ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿದ ಅಮಿತ್ ಷಾ ಅವರು ರಾಜ್ಯ ರಾಜಕಾರಣದ ಹಲವು ಅಂಶಗಳ ಬಗ್ಗೆ ಚರ್ಚೆ ನಡೆಸಿದ್ದರು. ನಿರಾಣಿ ಅವರು ಷಾ ಜತೆ ಸತತ ಸಂಪರ್ಕದಲ್ಲಿದ್ದು, ನಾಯಕತ್ವ ಬದಲಾವಣೆಯ ಕೂಗು ಗಟ್ಟಿಯಾಗುತ್ತಿದ್ದಂತೆಯೇ ನಿರಾಣಿ ಹೆಸರು ಮುನ್ನೆಲೆಗೆ ಬಂದಿದೆ.

ಆ ಮೂಲಕ ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ, ಬಸವರಾಜ ಬೊಮ್ಮಾಯಿ ಅವರ ಹೆಸರುಗಳ ಜತೆ ಮುರುಗೇಶ್ ನಿರಾಣಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಬಿಜೆಪಿ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ತೆರೆಮರೆಯಲ್ಲಿ ಆರಂಭವಾಗಿವೆ.

ಓದಿ:ಸಿಎಂ ವಿರೋಧಿ ಬಣದಿಂದ ನಾಯಕತ್ವ ಬದಲಾವಣೆ ಗೂಗ್ಲಿ: ಬಿಎಸ್​​ವೈ ಪರ ಬೆಂಬಲಿಗರ ಬ್ಯಾಟಿಂಗ್​​

ABOUT THE AUTHOR

...view details