ಬೆಂಗಳೂರು:ಹೈಕಮಾಂಡ್ ಇಂದು ಸಂಜೆ ವೇಳೆಗೆ ಪಟ್ಟಿಯನ್ನು ಕಳಿಸುವ ಸಾಧ್ಯತೆ ಇದ್ದು, ಯಾರ್ಯಾರಿಗೆ ಸಚಿವ ಸ್ಥಾನ ಫೈನಲ್ ಆಗಬಹುದು ಎಂಬ ಕಾತರದಲ್ಲಿ ಯಡಿಯೂರಪ್ಪ ಸಹ ಇದ್ದಾರೆ.
ತಾವು ಸೂಚಿಸಿರುವವರಿಗೇ ಸಚಿವ ಸ್ಥಾನ ಅಂತಿಮಗೊಳಿಸ್ತಾರೋ ಅಥವಾ ಕೈಬಿಡುತ್ತಾರೋ ಎಂಬ ಯೋಚನೆಯಲ್ಲಿ ಬಿಎಸ್‌ವೈ ಇದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳ ಜೊತೆ ಸಿಎಂ ಈಗಾಗಲೇ ತಮ್ಮ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಸುನೀಲ್ ಕುಮಾರ್, ಪ್ರಭು ಚೌಹಾಣ್, ಅಶ್ವಥ್ಥ ನಾರಾಯಣ ಜೊತೆಗೆ ಸಭೆ ನಡೆಸುತ್ತಿದ್ದಾರೆ.
ಇನ್ನೂ ಸಿಎಂ ಕೈ ಸೇರಿಲ್ಲ ಸಚಿವರ ಅಂತಿಮ ಪಟ್ಟಿ ಸಂಜೆ ವೇಳೆಗೆ ಅಮಿತ್ ಶಾ ಪಟ್ಟಿ ಕಳಿಸುವ ಸಾಧ್ಯತೆ:
ನೂತನ ಸಚಿವರ ಪಟ್ಟಿ ಬಗ್ಗೆ ಇನ್ನೂ ಸಸ್ಪೆನ್ಸ್ ಇದ್ದು, ಪಟ್ಟಿಗಾಗಿ ಸಿಎಂ ಯಡಿಯೂರಪ್ಪ ಕಾಯುತ್ತಿದ್ದಾರೆ. ನಾಳೆ ಸರ್ಕಾರದ ಸಚಿವರ ಪ್ರಮಾಣ ವಚನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದರೆ, ಕೇಂದ್ರ ನಾಯಕರ ಕೈಯಲ್ಲಿರುವ ಅಂತಿಮ ಪಟ್ಟಿ ಮಾತ್ರ ಇನ್ನೂ ಕೈ ಸೇರಿಲ್ಲ. ಸಂಜೆ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಟ್ಟಿ ಕಳಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಎಸ್‌ವೈ ಹಾಗೂ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಂದ ಎರಡು ಪಟ್ಟಿ ಅಮಿತ್ ಶಾ ಕೈ ಸೇರಿದ್ದು, ಯಾರ ಹೆಸರುಗಳು ಸಚಿವ ಸ್ಥಾನಕ್ಕೆ ಫೈನಲ್ ಆಗಬಹುದು ಎಂಬುದು ಸಿಎಂಗೂ ಸಸ್ಪೆನ್ಸ್ ಆಗಿ ಉಳಿದಿದೆ.
ನಾಳೆ 13ರಿಂದ 15 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಸಮಾರಂಭ ರಾಜಭವನದಲ್ಲಾ, ವಿಧಾನಸೌಧದಲ್ಲಾ ಎಂಬ ಚರ್ಚೆ ನಡೆಯುತ್ತಿದೆ. ರಾಜಭವನದಲ್ಲಾದ್ರೆ ಹೆಚ್ಚಿನ ಪ್ರಮಾಣದಲ್ಲಿ ಮುಖಂಡರು, ಬೆಂಬಲಿಗರಿಗೆ ಅವಕಾಶ ಸಿಗಲ್ಲ. ವಿಧಾನಸೌಧದಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಿದರೆ ಹೆಚ್ಚು ಜನ ಬರಬಹುದು ಎಂಬ ಚಿಂತನೆ ನಡೆಯುತ್ತಿದೆ. ಇಂದು ಸಂಜೆ ವೇಳೆಗೆ ನಿರ್ಧಾರವಾಗುವ ಸಾಧ್ಯತೆ ಇದೆ.