ಕರ್ನಾಟಕ

karnataka

ETV Bharat / state

ಕಾವೇರಿ.. ಜನಜಾಗೃತಿಗೆ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ಸೋಮವಾರದಿಂದ ರಾಜ್ಯಾದ್ಯಂತ ಹೋರಾಟ: ಬೊಮ್ಮಾಯಿ - ಕಾವೇರಿ ವಿವಾದ

ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Sep 22, 2023, 4:47 PM IST

Updated : Sep 22, 2023, 6:20 PM IST

ಬಸವರಾಜ ಬೊಮ್ಮಾಯಿ ಹೇಳಿಕೆ

ಬೆಂಗಳೂರು: ಕಾವೇರಿ ಬಗ್ಗೆ ಜನ ಜಾಗೃತಿ ಮೂಡಿಸಲು ನಾಳೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಿದ್ದು ಸೋಮವಾರದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜಾಗೃತಿ ಮೂಡಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕಾವೇರಿ ಹೋರಾಟದ ಕುರಿತು ಪಕ್ಷದ ನಾಯಕರ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರು ನಗರದಲ್ಲಿ ಕೂಡಾ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ. ನಾಳೆ ಬೆಳಗ್ಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ಮಾಡಲಾಗುತ್ತಿದ್ದು, ಸೋಮವಾರದಿಂದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಹೋರಾಟದ ಮೂಲಕ ಕಾವೇರಿ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.

ಡಿಸಿಎಂ ಡಿ.ಕೆ.‌ ಶಿವಕುಮಾರ್ ಮಾತೆತ್ತಿದರೆ ಹೇಳುವ ಬ್ರಾಂಡ್ ‌ಬೆಂಗಳೂರಿಗೆ ನೀರು ಒದಗಿಸುವ ಗ್ಯಾರಂಟಿ ಇಲ್ಲ. ನಮಗೆ ಈ ಸರ್ಕಾರ ಮೊದಲು ನೀರಿನ ಗ್ಯಾರಂಟಿ ಕೊಡಲಿ ಬೆಂಗಳೂರು ಸೇರಿ ಹಲವು ಕಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಕೃಷಿಗೆ ನೀರಿಲ್ಲ ಇವರು ಮೊದಲು ನೀರು ಕೊಡಲಿ, ಆಮೇಲೆ ಬ್ರ್ಯಾಂಡ್ ಬೆಂಗಳೂರು ಮಾಡಲಿ,‌ ಅರ್ಧಂಬರ್ಧ ಗ್ಯಾರಂಟಿಗಳನ್ನು ಸರ್ಕಾರ ಕೊಟ್ಟಿದೆ. ನೀರಿನ ಗ್ಯಾರಂಟಿ ಮೊದಲು ಕೊಡಲಿ, ನಿನ್ನೆ ಸುಪ್ರೀಂ ಕೋರ್ಟ್​ನಲ್ಲಿ ಬೆಂಗಳೂರಿನ ನೀರಿನ ಅಗತ್ಯತೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜ್ಯ ಸರ್ಕಾರದಿಂದ ಕಾವೇರಿ ಹಿತರಕ್ಷಣೆ ಸಾಧ್ಯವಿಲ್ಲ ಎಂದು ಜನ ಅರ್ಥ ಮಾಡಿಕೊಂಡಿದ್ದಾರೆ. ಯಾರ ಹತ್ತಿರ ಮಾತನಾಡಿದರೆ ಪರಿಹಾರ ಸಾಧ್ಯವೋ ಅದನ್ನು ಮಾಡುತ್ತಿಲ್ಲ. ತಮಿಳುನಾಡಿನ ಸಿಎಂ ಜತೆ ಮಾತನಾಡಿ ಅಂದರೆ ಸಿದ್ದರಾಮಯ್ಯ ಮಾತಾಡಲ್ಲ ಅಂತಾರೆ. ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಏನೇ ಆದರೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಜನ ಅಧಿಕಾರ ಕೊಟ್ಟಿರುವುದು ರಾಜ್ಯದ ಹಿತರಕ್ಷಣೆಗೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳೆ ಪರಿಹಾರ ಘೋಷಣೆ ಮಾಡಬೇಕು: ಕೋರ್ಟ್​ಗೆ ಹೋದಾಗ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಸುಪ್ರೀಂ ಕೋರ್ಟಿನಲ್ಲಿ ಗಟ್ಟಿಯಾಗಿ ವಾದ ಮಾಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಅದನ್ನ ಮಾಡಿದ್ರಾ.? ಈಗ ಕ್ಯಾಬಿನೆಟ್​ನಲ್ಲಿ ನೀರು ಬಿಡುವುದಿಲ್ಲ ಎನ್ನುವ ನಿರ್ಧಾರ ಮಾಡಬೇಕು. ರಾಜ್ಯದಲ್ಲಿ ಬರ ಅಂತ ಘೋಷಣೆ ಮಾಡಿದ್ದಾರೆ. ಪ್ರತಿ ಎಕರೆಗೆ 25 ಸಾವಿರ ಬೆಳೆ ಪರಿಹಾರ ನೀಡುವ ಘೋಷಣೆ ಮಾಡಬೇಕು. ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಪರ್ಯಾಯ ಏನು ಮಾಡಿದ್ದಾರೆ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ನಿರ್ಮಲಾನಂದನಾಥ ಶ್ರೀಗಳಿಂದ ಕಾವೇರಿ ಪ್ರತಿಭಟನೆಗೆ ಬೆಂಬಲ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ರಾಜ್ಯ ಸರ್ಕಾರ ಉಡಾಫೆ ಸರ್ಕಾರ, ಕಾವೇರಿ ವಿಚಾರವನ್ನು ಹಗುರವಾಗಿ ಪರಿಗಣಿಸಿದೆ ಪ್ರತಿಭಟನೆಯನ್ನೂ ಹಗುರವಾಗಿ ಪರಿಗಣಿಸಿದೆ. ಸರ್ಕಾರ ಇದೇ ಧೋರಣೆ ಮುಂದುವರೆಸಿದರೆ ಸ್ವಾಮೀಜಿಗಳು ಸೇರಿ ಜನರೆಲ್ಲಾ ದಂಗೆ ಏಳುತ್ತಾರೆ. ಸ್ವಾಮೀಜಿ ಅವರಿಂದ ಹಿಡಿದು ನಾಗರೀಕರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರು.

ಕಾವೇರಿ ವಿಚಾರದಲ್ಲಿ ಸರ್ಕಾರ ಎಡವಿದೆ. ಇದರ ಪರಿಣಾಮ ನೀರು ಬಿಡುವ ತೀರ್ಪು ಹೊರಗೆ ಬಿದ್ದಿದೆ. ಜನ ಸಂಕಷ್ಟದಲ್ಲಿದ್ದಾರೆ. ನಮ್ಮ ಬಿಜೆಪಿ ವಕೀಲರು ಪ್ರೊಸಿಡಿಂಗ್ ನೋಡಿದರೆ ಸರ್ಕಾರದ ಪರ ವಕೀಲರು ಸರಿಯಾಗಿ ವಾದ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಟ್ರಿಬ್ಯುನಲ್ ನಾರ್ಮ್ಸ್ ಬಗ್ಗೆ ಸರಿಯಾಗಿ ಹೇಳಿಲ್ಲ. ತಮಿಳುನಾಡಿನಲ್ಲಿ ಎಷ್ಟು ನೀರು ಬಳಕೆಯಾಗಿದೆ ಅದನ್ನ ಹೇಳಿಲ್ಲ ಎಂದು ಆರೋಪಿಸಿದರು.

ಮೈತ್ರಿ ಮಾತುಕತೆ: ಇಂದು ದೆಹಲಿಯಲ್ಲಿ ನಮ್ಮ ವರಿಷ್ಠರು, ಜೆಡಿಎಸ್ ನಾಯಕರ ಜೊತೆ ಚುನಾವಣಾ ಪೂರ್ವ ಮೈತ್ರಿ ಕುರಿತು ಮಾತುಕತೆ ಮಾತುಕತೆ ನಂತರ ರಾಜ್ಯ ಘಟಕಕ್ಕೆ ಮಾಹಿತಿ ರವಾನಿಸಲಿದ್ದಾರೆ. ರಾಜ್ಯದಲ್ಲಿ ಮುಂಬರಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್ ಒಟ್ಟಾಗಿ ಚುನಾವಣಾ ಎದುರಿಸುವ ಕುರಿತು ಈಗಾಗಲೇ ನಮ್ಮ ಹಿರಿಯ ನಾಯಕ ಯಡಿಯೂರಪ್ಪ ಹೇಳಿದ್ದಾರೆ. ನಾನೂ ಹೇಳಿದ್ದೇನೆ ದೆಹಲಿಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕತೆ ವಿಚಾರದ ಬೆಳವಣಿಗೆ ಸಾಧ್ಯತೆ ಇದೆ. ಮಾತುಕತೆ ನಂತರ ನಮ್ಮ ವರಿಷ್ಠರು ನಮಗೆ ಈ ಬಗ್ಗೆ ತಿಳಿಸುತ್ತಾರೆ ಎಂದರು.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ಜನ ಓಡಿಸಿದ್ದಾರೆ: ಸಚಿವ ಭೈರತಿ ಸುರೇಶ್

Last Updated : Sep 22, 2023, 6:20 PM IST

ABOUT THE AUTHOR

...view details