ಬೆಂಗಳೂರು :ಈಗಾಗಲೇ ಮುಂಗಾರು ಕೈಕೊಟ್ಟಿರುವ ಹಿನ್ನೆಲೆ ರೈತರು ವರುಣನ ಆಗಮನಕ್ಕಾಗಿ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಆದರೇ ಮತ್ತೊಂದೆಡೆ ಜುಲೈ ತಿಂಗಳು ಪ್ರಾರಂಭವಾದಾಗಿನಿಂದ ಟೊಮೆಟೋ ಸೇರಿದಂತೆ ಇತರೆ ತರಕಾರಿಗಳ ದರಗಳಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಜೂನ್ ಕೊನೆಯ ವಾರಕ್ಕೆ ಹೋಲಿಸಿದರೆ, ಒಂದು ಕೆಜಿಗೆ 20 ರಿಂದ 30 ರೂಪಾಯಿ ದರ ಹೆಚ್ಚಳವಾಗಿ, 100 ರ ಗಡಿ ದಾಟಿದೆ. ಇದರಿಂದ ಟೊಮೆಟೋ ಬೆಲೆ ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ.
ಕೇವಲ ಟೊಮೆಟೋ ದರ ಮಾತ್ರವಲ್ಲ, ಇತರ ತರಕಾರಿ ದರಗಳಲ್ಲೂ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಬೀನ್ಸ್ ಮತ್ತು ಕ್ಯಾರೆಟ್ ಶತಕದ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮಳೆ ಕುಂಠಿತವಾಗಿ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲದ ಕಾರಣ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದಿಂದ ಟೊಮೆಟೋ, ಕ್ಯಾರೆಟ್ ಮೊದಲಾದ ತರಕಾರಿಗಳನ್ನು ಖರೀದಿಸಲಾಗುತ್ತಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ.