ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪ್ರಮುಖ ಸೂತ್ರದಾರರು ಎನ್ನಲಾಗಿರುವ ನರೇಶ್ ಹಾಗೂ ಶ್ರವಣ್ ಜಾಮೀನು ತೀರ್ಪು ನ್ಯಾಯಾಧೀಶರು ಇಂದು ಪ್ರಕಟಿಸಲಿದ್ದಾರೆ.
ಇತ್ತೀಚಿಗೆ ಜಾಮೀನಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದ ಎಸ್ಐಟಿ ಪೊಲೀಸರು, ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಜಾಮೀನು ನೀಡದಿರಲು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಇಬ್ಬರ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ ಇಡೀ ಸಿ.ಡಿ ಪ್ರಕರಣದ ಭವಿಷ್ಯ ನಿರ್ಧರಿಸಲಿದೆ.
ವಿಚಾರಣೆಯ ಹಿನ್ನೆಲೆ:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿರೀಕ್ಷಣಾ ಜಾಮೀನು ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್ ತೀರ್ಪನ್ನು ಜೂನ್ 8ಕ್ಕೆ ಕಾಯ್ದಿರಿಸಿತ್ತು.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನರೇಶ್ ಗೌಡ ಹಾಗೂ ಶ್ರವಣ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಧೀಶ ಲಕ್ಷ್ಮಿನಾರಾಯಣ್ ಭಟ್ ವಿಚಾರಣೆ ನಡೆಸಿದರು. ಈ ವೇಳೆ ಎಸ್ಐಟಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಆಕ್ಷೇಪಣೆ ಪರಿಶೀಲಿಸಿದ ನ್ಯಾಯಾಧೀಶರು, ರಮೇಶ್ ಜಾರಕಿಹೊಳಿ ಯಾರಿಗೆ, ಯಾವಾಗ, ಎಷ್ಟು ಹಣ ಪಾವತಿಸಿದ್ದಾರೆ? ಅದನ್ನೇಕೆ ದೂರಿನಲ್ಲಿ ಉಲ್ಲೇಖಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲರು ಸಮರ್ಥನೆ ನೀಡಲು ಪ್ರಯತ್ನಿಸಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ವಾದಿಸಿ, ಇದು ರಾಜಕೀಯ ಪ್ರೇರಿತ ಪ್ರಕರಣ. ಅತ್ಯಾಚಾರ ಆರೋಪ ಹೊತ್ತಿರುವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ಅರ್ಜಿದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಂತಹ ಪ್ರಕರಣ ದಾಖಲಿಸುವ ಮೂಲಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರಕಿಹೊಳಿ ಅವರನ್ನು ಸಂತ್ರಸ್ತರೆಂಬಂತೆ ತೋರಿಸಲಾಗಿದೆ ಎಂದು ವಾದಿಸಿದ್ದರು.
ರಮೇಶ್ ಜಾರಕಿಹೊಳಿ ಎಸ್ಐಟಿ ಮುಂದೆ ಸಮ್ಮತಿಯಿಂದಲೇ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಹಾಗಿದ್ದೂ, ಎಸ್ಐಟಿ ಪೊಲೀಸರು ಜಾರಕಿಹೊಳಿ ರಕ್ಷಿಸಲು ಸಂತ್ರಸ್ತ ಯುವತಿ ಹಾಗೂ ಅರ್ಜಿದಾರರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು.
ಅಲ್ಲದೇ, ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅರ್ಜಿದಾರರು, ರಮೇಶ್ ಜಾರಕಿಹೊಳಿ ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದರು. ಇದೀಗ ಪೊಲೀಸರು ಹಣ ವಸೂಲಿ ಮಾಡಿಬಿಟ್ಟಿದ್ದಾರೆ ಎಂದು ಹೇಳುವ ಮೂಲಕ ಮೂಲ ಆರೋಪವನ್ನೇ ಬದಲಿಸಿದ್ದಾರೆ. ಹಾಗಿದ್ದೂ, ರಮೇಶ್ ಜಾರಕಿಹೊಳಿ ಹಣ ನೀಡಿದ್ದರೆ, ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದರೆಂದು ತಿಳಿಸಬೇಕಿತ್ತು ಎಂದು ವಾದಿಸಿದ್ದರು.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ಎ ಅಡಿ ದೂರು ದಾಖಲಿಸಬೇಕಿದ್ದಲ್ಲಿ, ದೃಶ್ಯಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಅಪ್ಲೋಡ್ ಮಾಡಿರಬೇಕು. ಆದರೆ, ಯಾರು ಅಪ್ಲೋಡ್ ಮಾಡಿದರೆಂದು ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೂ ತಿಳಿಸಿಲ್ಲ. ಹೀಗಿರುವಾಗ ಸೆಕ್ಷನ್ 67ಎ ಅಡಿ ಹೇಗೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊನ್ನಣ್ಣ ವಾದಿಸಿದರು. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.