ಬೆಂಗಳೂರು: ನ್ಯಾಯಾಲಯಗಳಲ್ಲಿ ದೀರ್ಘಕಾಲಿಕ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ 2023ನೇ ಸಾಲಿನ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ರೈತರು, ಬಡವರಿಗೆ ತ್ವರಿತ ನ್ಯಾಯದಾನ ಕಲ್ಪಿಸಿಕೊಡುವ ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಪರಾಜಯ ತಪ್ಪಿಸಲು ಪೂರಕವಾಗಲಿರುವ ಎರಡು ಹೊಸ ಕಾನೂನುಗಳು ಜಾರಿಗೆ ಬರಲಿವೆ.
ಸಣ್ಣ, ಅತೀ ಸಣ್ಣ ರೈತರು ಹಾಗೂ ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳ ವ್ಯಾಜ್ಯಗಳು ಕಾಲಮಿತಿಯಲ್ಲಿ ಇತ್ಯರ್ಥ ಆಗಲು ಅನುಕೂಲವಾಗುವ ಸಿವಿಲ್ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಸಣ್ಣ, ಅತೀ ಸಣ್ಣ ರೈತರು ಹಾಗೂ ಬಡವರಿಗೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ದೀರ್ಘ ಕಾಲ ಎದುರಿಸಲು ಆರ್ಥಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಇವುಗಳ ಶೀಘ್ರ ವಿಲೇವಾರಿಯಾಗಬೇಕಿದೆ. ಇಂತಹ ಪ್ರಕರಣಗಳು ಕಾಲಮಿತಿಯಲ್ಲಿ ವಿಲೇವಾರಿ ಆಗುವುದಕ್ಕೆ ಹೊಸ ಕಾಯ್ದೆ ಸೂಕ್ತ ಕಾರ್ಯವಿಧಾನ ರೂಪಿಸಲಿದೆ ಎಂಬುದಾಗಿ ವಿಧೇಯಕದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ : ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ
ಇದೇ ರೀತಿ, ನ್ಯಾಯಾಲಯಗಳು ಹಾಗೂ ಶಾಸನಬದ್ಧ ನ್ಯಾಯಾಧೀಕರಣಗಳ ಮುಂದಿರುವ ಸರ್ಕಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ರಾಜ್ಯಕ್ಕೆ ಸೋಲು ಆಗದಂತೆ ಬಲ ನೀಡುವ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕವನ್ನು ಕೂಡ ಮಂಡಿಸಲಾಗಿದೆ. ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಆದೇಶಗಳು, ಸುತ್ತೋಲೆಗಳಿದ್ದವು. ಆದರೆ ವ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಕಾರ್ಯಯೋಜನೆ ಇರಲಿಲ್ಲ. ಆದ್ದರಿಂದ ಈ ಕಾನೂನಿನ ಮೂಲಕ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಷಯದಲ್ಲಿ ದಕ್ಷತೆ ಮತ್ತು ಜವಾಬ್ದಾರಿ ನಿರ್ವಹಣೆಯನ್ನು ತರಲಾಗುತ್ತಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು 2023ನೇ ಸಾಲಿನ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕವನ್ನು ಮಂಡಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು 2023ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.
ಅಲ್ಲದೆ, ಸುಳ್ಳು ಮಾಹಿತಿ ದಸ್ತಾವೇಜು ನೋಂದಣಿ ನಿರಾಕರಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ರದ್ದು ಮಾಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕಗಳನ್ನು ಕೂಡ ಮಂಡಿಸಲಾಯಿತು. ಜೊತೆಗೆ ಸಹಕಾರ ಸಚಿವ ಕೆ. ಎನ್.ರಾಜಣ್ಣ ಅವರು 2023ನೇ ಸಾಲಿನ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಮಂಡಿಸಿದರು.
ಇದನ್ನೂ ಓದಿ:ಸಾರ್ವಜನಿಕ ಸಂಗ್ರಹಣೆ, ಜಿಎಸ್ಟಿ, ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ್ಕೆ ವಿಧಾನ ಪರಿಷತ್ ಅಂಗೀಕಾರ