ಬೆಂಗಳೂರು: ವಾಹನಗಳ ಮಾಲೀಕರು ಸಂಚಾರಿ ದಂಡ ಪಾವತಿಸಲು ನೀಡಲಾಗಿರುವ ಶೇ 50 ರಿಯಾಯಿತಿ ಅವಕಾಶಕ್ಕೆ ಕೊನೆಯ ದಿನವಾದ ಇಂದು ಸಹ ಭರ್ಜರಿ ದಂಡ ಸಂಗ್ರಹಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿ 2 ರಿಂದ ಆರಂಭವಾಗಿದ್ದ ಶೇ 50 ರಿಯಾಯಿತಿ ಅವಕಾಶದಿಂದಾಗಿ ವರ್ಷಗಳಿಂದ ಬಾಕಿ ಉಳಿದಿದ್ದ ಹಲವು ಪ್ರಕರಣಗಳ ಕೋಟ್ಯಂತರ ರೂಪಾಯಿ ದಂಡ ಸಂಗ್ರಹಣೆಯಾಗಿದೆ. ಅಂತಿಮ ದಿನವಾದ ಇಂದೂ ಸಹ ಬೆಂಗಳೂರು ಒನ್, ಸಂಚಾರಿ ನಿರ್ವಹಣಾ ಕೇಂದ್ರದಲ್ಲಿ ವಾಹನಗಳ ಮಾಲೀಕರು ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿಸುತ್ತಿದ್ದಾರೆ.
ರಿಯಾಯತಿ ಘೋಷಿಸಿದ ಆರಂಭದ ದಿನದಿಂದ ನಿನ್ನೆಯವರೆಗೂ (ರಾತ್ರಿ 8ಗಂಟೆಯವರೆಗಿನ ಮಾಹಿತಿ) 31.11 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದ 85.83 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಅಂತಿಮ ದಿನವಾದ ಇಂದು ದಂಡ ಪಾವತಿಗೆ ಜನರು ಮುಗಿಬಿದ್ದಿದ್ದು, ದಂಡ ಸಂಗ್ರಹ ನೂರು ಕೋಟಿ ರೂಪಾಯಿ ಆಸುಪಾಸಿಗೆ ತಲುಪುವ ನಿರೀಕ್ಷೆಯಿದೆ. ವಾರದ ಹಿಂದೆ ಸರ್ಕಾರ ಇದುವೆರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಿದ್ದಿದ್ದರೂ, ಆ ದಂಡವನ್ನು ಪಾತಿ ಮಾಡದೇ ಬಾಕಿ ಇಟ್ಟುಕೊಂಡಿದ್ದ ವಾಹನ ಸವಾರರಿಗೆ ಈ 50 ಶೇ ರಿಯಾಯಿತಿಯ ಆಫರ್ ಅನ್ನು ಘೋಷಣೆ ಮಾಡಿತ್ತು.
ರಾಜ್ಯದಲ್ಲಿ ಸುಮಾರು 1300 ಕೋಟಿ ರೂಗಳಿಗೂ ಅಧಿಕ ದಂಡ ಪಾವತಿಗೆ ಬಾಕಿ ಇರುವ ಕುರಿತು ಕಳವಳ ವ್ಯಕ್ತಪಡಿಸಿದ್ದ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿತ್ತು. ಇದಕ್ಕೂ ಮುಂಚೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚರ್ಚಿಸಲಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಶೇ 50 ರಿಯಾಯಿತಿ ನೀಡುವ ಕುರಿತು ನಿರ್ಧರಿಸಿ ಸಾರಿಗೆ ಇಲಾಖೆ ರಿಯಾಯಿತಿ ಆಫರ್ನ ಆದೇಶ ಹೊರಡಿಸಿತ್ತು.