ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಕೊಡಗಿಗೆ ಇಂದು ಸಿದ್ದರಾಮಯ್ಯ ಭೇಟಿ, ಸುಬ್ಬಯ್ಯ ಕುಟುಂಬಕ್ಕೆ ಸಾಂತ್ವನ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ವಿರಾಜಪೇಟೆಯ ಪೊನ್ನಂಪೇಟೆ ಸಮೀಪದ ಎ.ಕೆ. ಸುಬ್ಬಯ್ಯ ಅವರ ನಿವಾಸಕ್ಕೆ ಭೇಟಿ ಕೊಡಲಿದ್ದಾರೆ.
ಬೆಳಗ್ಗೆ 9ಕ್ಕೆ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದು, 9.20ಕ್ಕೆ ಮೈಸೂರು ತಲುಪಲಿದ್ದಾರೆ. ಇಲ್ಲಿಂದ ರಸ್ತೆ ಮಾರ್ಗದ ಮೂಲಕ ಕೊಡಗು ಜಿಲ್ಲೆಯ ವಿರಾಜಪೇಟೆಯ ಪೊನ್ನಂಪೇಟೆ ಸಮೀಪದ ಎ.ಕೆ. ಸುಬ್ಬಯ್ಯ ಅವರ ಮನೆಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯವಾಗಿದ್ದ ಹಿರಿಯ ರಾಜಕಾರಣಿ, ಹೋರಾಟಗಾರ ಹಾಗೂ ವಕೀಲ ಎ. ಕೆ ಸುಬ್ಬಯ್ಯ ಇತ್ತೀಚೆಗಷ್ಟೇ ನಿಧನರಾಗಿದ್ದರು.
ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ಮೈಸೂರಿಗೆ ಆಗಮಿಸಿ ಕೆಲಕಾಲ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಮಾಲೋಚಿಸಿ ಮಧ್ಯಾಹ್ನ 3.15ಕ್ಕೆ ವಿಶೇಷ ವಿಮಾನದಲ್ಲಿ ಹೊರಟು ಬೆಂಗಳೂರು ತಲುಪಲಿದ್ದಾರೆ.