ಬೆಂಗಳೂರು:ಜೆಡಿಎಸ್ ಪಕ್ಷ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿಮುಗಿಸುವ ಸಂಚು ನಡೆದಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿಕೊಂಡು ಚಕ್ರವ್ಯೂಹ ರಚಿಸಿ, ತಮ್ಮ ಕುಟುಂಬವನ್ನು ಸೋಲಿಸಲು ಸಂಚು ನಡೆಸಿದ್ದಾರೆ. ಇದಕ್ಕೆ ತಾವು ಹೆದರುವುದಿಲ್ಲ ಕುತಂತ್ರಕ್ಕೆ ತಕ್ಕ ಉತ್ತರ ನೀಡುವುದಾಗಿ 'ಈ ಟಿವಿ ಭಾರತ್'ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.
ತಮ್ಮ ವಿರೋಧಿಗಳು ಹೆಣೆದ ಚಕ್ರವ್ಯೂಹ ಭೇದಿಸಲು ತಾವು ಮಂಡ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕಾಯಿತು. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅತ್ಯಧಿಕ ಮತಗಳನ್ನು ಪಡೆದು ಗೆಲ್ಲುತ್ತಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗಾಗಿ ಮಾಡಿಕೊಂಡ ಮೈತ್ರಿ ಧರ್ಮ ಸ್ಥಳೀಯವಾಗಿ ನಿರೀಕ್ಷಿತ ಮಟ್ಟದಲ್ಲಿ ಪಾಲನೆಯಾಗಿಲ್ಲ. ಅದಾಗ್ಯೂ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಪಕ್ಷಗಳು 18 ರಿಂದ 20 ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈತ್ರಿ ಧರ್ಮ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸರಿಯಾಗಿ ಪಾಲನೆಯಾಗಿದೆ. ನಾಯಕರ ಮಟ್ಟದಲ್ಲೂ ಯಾವುದೇ ಕುಂದುಂಟಾಗಿಲ್ಲ. ಆದರೆ ಸ್ಥಳೀಯವಾಗಿ ಕೆಲವು ಅಂಶಗಳಿಂದಾಗಿ ಮೈತ್ರಿ ಧರ್ಮವನ್ನು ಸಂಪೂರ್ಣವಾಗಿ ಅನುಸರಿಸಲಾಗಿಲ್ಲ. ಇದಕ್ಕೆ ನಾಯಕರು ಕಾರಣರಲ್ಲ ಎಂದು ಹೇಳಿದರು.