ಕರ್ನಾಟಕ

karnataka

ETV Bharat / state

ಟಿಪ್ಪು ಜಯಂತಿ ಆಚರಣೆ ರದ್ದು ವಿವಾದ: ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ - ಟಿಪ್ಪು ಜಯಂತಿ ಆಚರಣೆ ರದ್ದು ವಿವಾದ

ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವ ಸರ್ಕಾರದ ತೀರ್ಮಾನದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಉಚ್ಛ ನ್ಯಾಯಾಲವು ಸರ್ಕಾರ ತನ್ನ ಆದೇಶವನ್ನು ಪುನರ್ ಪರಿಶೀಲಿಸಿ ತೀರ್ಮಾನಿಸಲಿ ಎಂದು ಹೇಳಿದೆ.

ಹೈ ಕೋರ್ಟ್
High Court

By

Published : Jan 20, 2020, 11:16 PM IST

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವ ಸರ್ಕಾರದ ತೀರ್ಮಾನದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಹೈಕೋರ್ಟ್​ ಸ್ಪಷ್ಟಪಡಿಸಿದೆ. ಅಲ್ಲದೆ, ಸರ್ಕಾರ ತನ್ನ ಆದೇಶವನ್ನು ಪುನರ್ ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದು ಹೇಳಿದೆ.

ಟಿಪ್ಪು ಜಯಂತಿ ರದ್ದು ಮಾಡಿ ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಅಲಿ ಷಾ ಹಾಗೂ ಸಂಘಟನೆಗಳಾದ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಟಿಪ್ಪು ಜಯಂತಿ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ. ಹೀಗಾಗಿ ಸರ್ಕಾರ ತನ್ನ ಆದೇಶವನ್ನು ಪುನರ್ ಪರಿಶೀಲಿಸುವಂತೆ ನ್ಯಾಯಾಲಯವು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಮನವಿ ಪುರಸ್ಕರಿಸದ ಪೀಠ, ಈ ಕುರಿತು ನ್ಯಾಯಾಲಯ ಮಧ್ಯ ಪ್ರವೇಸಿಸುವುದು ಸರಿಯಾದ ಕ್ರಮವಲ್ಲ. ಟಿಪ್ಪು ಜಯಂತಿ ನಿಷೇಧಿಸಿರುವ ಕ್ರಮ ಸರ್ಕಾರದ ನೀತಿಯಾಗಿದೆ ಎಂದು ತಿಳಿಸಿತು.

ಇದೇ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಿಸಿ, ಆದೇಶ ಪರಿಶೀಲಿಸುವ ಕುರಿತು ಸರ್ಕಾರದ ನಿಲುವು ತಿಳಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ಆದೇಶವನ್ನು ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್​ ಪೀಠವು ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.

ABOUT THE AUTHOR

...view details