ಬೆಂಗಳೂರು:ಕಳೆದ ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಇದ್ದಕ್ಕಿದ್ದಂತೆ ರದ್ದುಪಡಿಸಿ ಚರಿತ್ರೆಗೆ ಅಪಮಾನ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಈ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಟಿಪ್ಪು ಜಯಂತಿ ರದ್ದು: ಆದೇಶ ಪುನರ್ ಪರಿಶೀಲಿಸುವಂತೆ ಸಿದ್ದರಾಮಯ್ಯ ಆಗ್ರಹ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಸರ್ಕಾರದಿಂದ ಟಿಪ್ಪು ಜಯಂತಿ ಒಂದನ್ನು ಮಾತ್ರ ಆಚರಿಸುತ್ತಿಲ್ಲ. ಅನೇಕ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದೆವು. ಬಸವ, ವಾಲ್ಮೀಕಿ, ಅಂಬೇಡ್ಕರ್, ರಾಣಿ ಚೆನ್ನಮ್ಮ, ಸೇವಾಲಾಲ್ ಸೇರಿ ಅನೇಕ ಮಹನೀಯರ ಮತ್ತು ಇತಿಹಾಸ ಪುರುಷರ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಆದರೆ ಎಲ್ಲಾ ಬಿಟ್ಟು ಕೇವಲ ಟಿಪ್ಪು ಜಯಂತಿ ರದ್ದುಪಡಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ಟಿಪ್ಪು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ನಾವು ಜಯಂತಿಯನ್ನು ಆಚರಿಸುತ್ತಿಲ್ಲ. ಬದಲಾಗಿ ಆತ ಮೈಸೂರು ರಾಜನಾಗಿದ್ದ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ತನ್ನ ಮಕ್ಕಳನ್ನು ಅಡಮಾನ ಇಟ್ಟಿದ್ದ. ಆತ ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ. 4 ಮೈಸೂರು ಯುದ್ಧಗಳು ನಡೆದಿದ್ದು, 4 ಕೂಡ ಬ್ರಿಟಿಷರ ವಿರುದ್ಧವೇ ನಡೆದಿವೆ. ಬಿಜೆಪಿಯವರು ಮಾತೆತ್ತಿದರೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಹಾಗಾದರೆ ಟಿಪ್ಪು ಜಯಂತಿಯನ್ನು ಮಾತ್ರ ಏಕೆ ರದ್ದು ಮಾಡಿದರು? ಬೇರೆ ಜಯಂತಿಗಳನ್ನು ಏಕೆ ರದ್ದು ಮಾಡಲಿಲ್ಲ.
ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಪೇಟ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಟಿಪ್ಪು ಪಾತ್ರ ವಹಿಸಿದ್ದರು. ಟಿಪ್ಪುವನ್ನು ಹಾಡಿ ಹೊಗಳಿದರು. ಜಗದೀಶ್ ಶೆಟ್ಟರ್, ಅಶೋಕ್, ಪಿ.ಸಿ.ಮೋಹನ್ ಇವರೆಲ್ಲ ಟಿಪ್ಪು ಧಿರಿಸು ಧರಿಸಿದರು. ಮುಖ್ಯಮಂತ್ರಿ ಆಗಿದ್ದ ವೇಳೆ ಜಗದೀಶ್ ಶೆಟ್ಟರ್ ಟಿಪ್ಪು ಬಗೆಗಿನ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಪ್ರೇಮಿ ಎಂದು ನೀವೇ ಬರೆದಿದ್ದೀರಿ. ಈಗ ಇದ್ದಕ್ಕಿದ್ದಂತೆ ಈತ ಮತಾಂಧ ಆಗಿಬಿಟ್ಟನೆ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ಜಾತ್ಯಾತೀತ ವ್ಯಕ್ತಿ. ಜಾತಿ-ಧರ್ಮಗಳನ್ನು ಗೌರವಿಸುತ್ತಿದ್ದ ಆತ ಶೃಂಗೇರಿ, ಮೇಲುಕೋಟೆ, ನಂಜನಗೂಡು ದೇವಸ್ಥಾನಗಳಿಗೆ ಸಹಾಯ ಮಾಡಿದ್ದಾನೆ. ಮತಾಂಧನಾಗಿದ್ದರೆ ಹಿಂದೂ ದೇವಾಲಯಗಳಿಗೆ ಏಕೆ ಸಹಾಯ ಮಾಡಬೇಕಿತ್ತು? ಟಿಪ್ಪು ಜಯಂತಿ ರದ್ದುಪಡಿಸಿ ಚರಿತ್ರೆಗೆ ಅಪಮಾನ ಮಾಡಲಾಗಿದ್ದು, ಚರಿತ್ರೆ ತಿರುಚುವ ಕೆಲಸ ಮಾಡಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.