ಕರ್ನಾಟಕ

karnataka

ETV Bharat / state

ರಾಜ್ಯಸಭೆ TO ಮೋದಿ ಸಂಪುಟ: ಉದ್ಯಮಿ ರಾಜೀವ್ ಚಂದ್ರಶೇಖರ್ ಕನಸೀಗ ನನಸು - ಮೋದಿ ಸಂಪುಟ

ಉದ್ಯಮಿಯಾಗಿರುವ ರಾಜೀವ್ ಚಂದ್ರಶೇಖರ್ ಬಿಜೆಪಿಯಿಂದ ರಾಜ್ಯಸಭೆ ಪ್ರವೇಶಿಸಿದ್ದರು. ಸಿಎಂ ಬಿಎಸ್​​ವೈ ಜೊತೆ ಉತ್ತಮ ಒಡನಾಟ ಹೊಂದಿದ್ದ ಇವರೀಗ ಕೇಂದ್ರ ಸಂಪುಟದಲ್ಲಿ ಸ್ಥಾನಗಿಟ್ಟಿಸಿದ್ದಾರೆ.

RAJIV_CHANDRASHEKAR
ರಾಜೀವ್ ಚಂದ್ರಶೇಖರ್

By

Published : Jul 7, 2021, 6:43 PM IST

ಬೆಂಗಳೂರು: ರಾಜಕೀಯ ತಂತ್ರಗಾರಿಕೆ ಮೂಲಕವೇ ರಾಜಕೀಯ ಮುನ್ನೆಲೆಗೆ ಬಂದ ಉದ್ಯಮಿ ರಾಜೀವ್ ಚಂದ್ರಶೇಖರ್ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಪ್ರವೇಶಿಸಿ ಬಿಜೆಪಿ ಸೇರ್ಪಡೆಯಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಇದೀಗ ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಉದ್ಯಮಿ ರಾಜೀವ್ ಚಂದ್ರಶೇಖರ್ 1964ರ ಮೇ 31ರಂದು ಗುಜರಾತ್​​ನ ಅಹಮದಾಬಾದ್​​ನಲ್ಲಿ ಕೇರಳ ಮೂಲಕ ಏರ್ ಕಮಾಂಡರ್ ಎಂ.ಕೆ ಚಂದ್ರಶೇಖರ ಪುತ್ರನಾಗಿ ಜನಿಸಿದ್ದು, ತಂದೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ರಾಜೀವ್ ಚಂದ್ರಶೇಖರ್ ತಮ್ಮ ಬಾಲ್ಯವನ್ನು ಬೆಂಗಳೂರಿನಲ್ಲೇ ಕಳೆದರು.

ಮಂಗಳೂರು ವಿವಿ ಮಣಿಪಾಲ ಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ನಂತರ ಅಮೆರಿಕಗೆ ಹಾರಿದ ಅವರು, ಚಿಕಾಗೋದಲ್ಲಿ ಇಲಿನಾನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿ ಗಣಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು, 1992ರಲ್ಲಿ ಭಾರತಕ್ಕೆ ಮರಳಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ರಾಜಕೀಯ ನಡೆ:

2006ರಲ್ಲಿ ಮೊದಲ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. 2012ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯ ಸಭೆಗೆ ಪುನರಾಯ್ಕೆಯಾದ ಅವರು 2018ರಲ್ಲಿ ಬಿಜೆಪಿ ಸೇರಿ ರಾಜ್ಯಸಭೆಗೆ 3ನೇ ಬಾರಿ ಪ್ರವೇಶ ಮಾಡಿದ್ದಾರೆ.

ಸದ್ಯ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಪುದುಚೇರಿ ವಿಧಾನಸಭಾ ಚುನಾವಣೆ ವೇಳೆ ಸಹ- ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಅಲ್ಲಿ ಪಕ್ಷವನ್ನು ಗೆಲ್ಲಿಸುವಲ್ಲಿ ರಾಜೀವ್ ಚುನಾವಣಾ ತಂತ್ರಗಾರಿಕೆ ಪ್ರಮುಖವಾಗಿದ್ದು, ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಮತ್ತೊಂದು ರಾಜ್ಯದಲ್ಲಿ ಬಿಜೆಪಿ‌ ಅಧಿಕಾರಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಇದರ ಫಲವಾಗಿ ಇದೀಗ ಕೇಂದ್ರ ಸಂಪುಟದಲ್ಲಿ ಸ್ಥಾನವನ್ನು ನೀಡುವ ಮೂಲಕ ರಾಜಕೀಯ ಜೀವನದಲ್ಲಿ ಮಹತ್ವದ ಜವಾಬ್ದಾರಿ ಹೊರಿಸಲಾಗಿದೆ.

ರಾಜಕೀಯ ಅಧಿಕಾರ ನಿರ್ವಹಣೆ:

* ಮಾಜಿ ಪ್ರಧಾನಿ ವಾಜಪೇಯಿ ಅವರ ಸಂಪುಟದಲ್ಲಿ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಯುವ ಸದಸ್ಯ
* ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಸೇವೆ
* 1999-2002ರ ವರೆಗೆ ಮಾಹಿತಿ ತಂತ್ರಜ್ಞಾನ ಇಲಾಖೆ ಸಲಹಾ ಸಮಿತಿ ಸದಸ್ಯ
* ಮೂಲಸೌಕರ್ಯ ಕಾರ್ಯಪಡೆ ಅಧ್ಯಕ್ಷ
* ರಕ್ಷಣಾ ಇಲಾಖೆ ಸ್ಥಾಯಿ ಸಮಿತಿ ಸದಸ್ಯ
* ಹಣಕಾಸು ಸಮಾಲೋಚನಾ ಸಮಿತಿ ಸದಸ್ಯ
* ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕೇಂದ್ರ ಸಲಹಾ ಸಮಿತಿ ಸದಸ್ಯ

ರಾಜ್ಯದಲ್ಲಿ ಸೇವೆ:

* ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮಾನಿಟರಿಂಗ್ ಸಮಿತಿ ಉಪಾಧ್ಯಕ್ಷ
* ಜುಪಿಟರ್ ಕ್ಯಾಪಿಟಲ್ ಪ್ರೈ.ಲಿ. ಮಂಡಳಿ ಸ್ಥಾಪಕ ಮತ್ತು ಸಲಹೆಗಾರ
* ಫ್ಲಾಗ್ ಆಫ್ ಹಾನರ್ ಫೌಂಡೇಶನ್ ಸ್ಥಾಪಕ
* ನಮ್ಮ ಬೆಂಗಳೂರು ಪ್ರತಿಷ್ಠಾನದ ಸ್ಥಾಪಕ ಮತ್ತು ಟ್ರಸ್ಟಿ
* ಆರ್.ಸಿ ಫೌಂಡೇಷನ್ ಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ

ಪ್ರಶಸ್ತಿ:
* 2007ರಲ್ಲಿ ಚಿಕಾಗೋದ ಇಲಿಯನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಐಐಟಿ ಗ್ಲೋಬಲ್ ಸರ್ವೀಸ್ ಅವಾರ್ಡ್ ಪಡೆದುಕೊಂಡಿದ್ದಾರೆ.

ಬಿಎಸ್​​​ವೈ ಜೊತೆ ಉತ್ತಮ ಒಡನಾಟ

2009ರ ನೆರೆ ಪ್ರವಾಹದಿಂದ ಸೂರು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಯಡಿಯೂರಪ್ಪ ಸರ್ಕಾರ ಹಮ್ಮಿಕೊಂಡಿದ್ದ ಆಶ್ರಯ ಯೋಜನೆಯನ್ನು ಯಶಸ್ವಿಗೊಳಿಸಲು ರಾಜೀವ್ ಚಂದ್ರಶೇಖರ್ ಸಹಕಾರ ನೀಡಿದ್ದರು. ಸಿಸ್ಕೋ, ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳನ್ನು ಒಗ್ಗೂಡಿಸಿ ನೆರೆಪೀಡಿತ ಪ್ರದೇಶಗಳಲ್ಲಿ 40 ಸಾವಿರ ಮನೆಗಳನ್ನು ನಿರ್ಮಿಸುವ ಅಭೂತಪೂರ್ವ ಕಾರ್ಯ ಸಫಲವಾಗುವಂತೆ ನೋಡಿಕೊಂಡರು.

ಇದರಿಂದ ಯಡಿಯೂರಪ್ಪ ಜೊತೆ ಅಂದಿನಿಂದಲೇ ಉತ್ತಮ ಬಾಂಧವ್ಯ ವೃದ್ದಿಯಾಯಿತು. ಇದು ಅವರ ರಾಜಕೀಯ ಏಳಿಗೆಯಲ್ಲೂ ಮಹತ್ವದ ಪಾತ್ರ ವಹಿಸಿತು. ಪರಿಣಾಮವಾಗಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ರಾಜೀವ್ ಚಂದ್ರಶೇಖರ್ ಪರ ಮತ ಚಲಾಯಿಸಲು ಪಕ್ಷದ ಶಾಸಕರಿಗೆ ಯಡಿಯೂರಪ್ಪ ಸೂಚನೆ ನೀಡಿದ್ದರು.

ಆರ್‌ಸಿ ಪ್ರತಿಷ್ಠಾನದ ಮೂಲಕ ಬಾಗಲಕೋಟೆ ಜಿಲ್ಲೆಯ ಶಿರಬಡಗಿ ಗ್ರಾಮದಲ್ಲಿ 293ಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿರುವ ರಾಜೀವ್ ಚಂದ್ರಶೇಖರ್, ಬೆಂಗಳೂರಿನಲ್ಲಿರುವ ಸ್ವತಂತ್ರ ಭಾರತದ ಪ್ರಥಮ ಸೇನಾ ಸ್ಮಾರಕದ 210 ಅಡಿ ಧ್ವಜ ಸ್ತಂಭದ ಮೇಲೆ ಹಾರಾಡುತ್ತಿರುವ ರಾಷ್ಟ್ರಧ್ವಜವನ್ನು ನಿರಂತರವಾಗಿ ಕಾಣಿಕೆಯಾಗಿ ನೀಡುತ್ತಾ ಬಂದಿದ್ದಾರೆ.

ಅಷ್ಟು ಮಾತ್ರವಲ್ಲದೆ, ಬೆಂಗಳೂರಿನ ಅಭಿವೃದ್ಧಿಗೆ ಸಲಹೆ, ಪರಿಸರಕ್ಕೆ ಮಾರಕ ಎನ್ನುವ ಕಾರಣಕ್ಕೆ ಉಕ್ಕಿನ ಸೇತುವೆ ವಿರುದ್ಧ ಹೋರಾಟ, ಹೀಗೆ ಹಲವಾರು ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಇಂದು ಉದ್ಯಮದ ಜೊತೆ ಜೊತೆಯಲ್ಲಿಯೇ ರಾಜಕೀಯ ಮೆಟ್ಟಿಲುಗಳನ್ನು ಹಂತ-ಹಂತವಾಗಿ ಏರಿರುವ ರಾಜೀವ್ ಚಂದ್ರಶೇಖರ್ ಎರಡು ದಶಕಗಳ ಕಾಲ ಬಿಜೆಪಿಗೆ ಬೆಂಬಲವಾಗಿಯೇ ಇದ್ದು, ಇದೀಗ ಬಿಜೆಪಿ ಸೇರಿದ್ದರ ತಮ್ಮ ಉದ್ದೇಶವನ್ನು ಕೇವಲ ಮೂರು ವರ್ಷಗಳಲ್ಲೇ ಈಡೇರಿಸಿಕೊಂಡಿದ್ದಾರೆ.

ABOUT THE AUTHOR

...view details