ಬೆಂಗಳೂರು:ಕಲ್ಲು ಕ್ವಾರಿಯಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಸ್ಫೋಟಕ ವಸ್ತುಗಳ ಪರವಾನಗಿ ಪಡೆಯಲು ಗಣಿ ಸುರಕ್ಷತಾ ಮಹಾ ನಿದೇರ್ಶಕರು(ಡಿಜಿಎಂಎಸ್) ಯಿಂದ ನೀಡಿರುವ ಸಮಯಾವಕಾಶವನ್ನು ಇನ್ನಷ್ಟು ವಿಸ್ತರಣೆ ಮಾಡುವಂತೆ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
ಬುಧವಾರ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ನಿಯೋಗವು ವಿಕಾಸಸೌಧದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರನ್ನು ಭೇಟಿಯಾಗಿ ತುರ್ತಾಗಿ ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಪತ್ರ ಸಲ್ಲಿಸಿದೆ.
ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ನಿಯೋಗದಿಂದ ಸಚಿವ ಮುರುಗೇಶ್ ಆರ್.ನಿರಾಣಿ ಭೇಟಿ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆಯ ಹಿನ್ನೆಲೆ ಕಾನೂನು ಬಾಹಿರವಾಗಿ ಸಂಗ್ರಹಿಸಿಕೊಂಡಿರುವ ಸ್ಫೋಟಕ ವಸ್ತುಗಳನ್ನು ತಕ್ಷಣವೇ ಹಿಂತಿರುಗಿಸುವಂತೆ ಸಚಿವ ನಿರಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಇದರ ಬೆನ್ನಲ್ಲೇ ನಿಯೋಗವು ಸಚಿವರನ್ನು ಭೇಟಿಯಾಗಿ ಸ್ವಲ್ಪ ಕಾಲಾವಕಾಶ ನೀಡುವಂತೆ ಮನವರಿಕೆ ಮಾಡಿಕೊಟ್ಟಿದೆ. ಕಂದಾಯ ಸಚಿವ ಆರ್.ಅಶೋಕ್ ಜೊತೆ ಚರ್ಚೆಸಿ ಸರ್ಕಾರಿ ಜಮೀನಿನಲ್ಲಿ ಸ್ಥಾಪಿಸಲಾಗಿರುವ ಕ್ರಷರ್ ಘಟಕಗಳನ್ನು ಸರ್ಕಾರಿ ಆದೇಶದ ಅನ್ವಯ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡುವಂತೆ ನಿಯೋಗವು ಕೋರಿತು.
ರಾಜ್ಯಾದ್ಯಂತ ರಾಯಲ್ಟಿ ಮತ್ತು ಹೆಚ್ಚುವರಿ ವಾರ್ಷಿಕ ಪ್ರೀಮಿಯಂ ಪಾವತಿ (ಎಎಪಿಪಿ) ರದ್ದತಿಗೆ ಸಂಬಂಧಿಸಿದಂತೆ ಅಂತಿಮ ಬಳಕೆದಾರರು ಖನಿಜ ರವಾನೆ ಪರವಾನಗಿ (ಎಂಡಿಪಿ) ಪಡೆಯುವುದು ಕಡ್ಡಾಯಗೊಳಿಸುವಂತೆ ಒತ್ತಾಯಿಸಿದರು. ದಂಡವಾಗಿ ಸಂಗ್ರಹಿಸಿದ ಐದು ಪಟ್ಟು ರಾಜಧನವನ್ನು ರದ್ದುಗೊಳಿಸುವಂತೆ ಕ್ವಾರಿ ಮತ್ತು ಕಲ್ಲು ಕ್ರಷರ್ ಮಾಲೀಕರು ಸಚಿವರಿಗೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವಿಧಿಸಿರುವ ಪರಿಸರ ಸೆಸ್ (ಹಸಿರು ಸೆಸ್) ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಂದೆ ಉಳಿಸದ/ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಧಿಸಿರುವ ಅತ್ಯಧಿಕ ಪರಿಸರ ಹೆಚ್ಚುವರಿ ಶುಲ್ಕವನ್ನು ರದ್ದುಪಡಿಸಬೇಕೆಂಬ ಬೇಡಿಕೆ ಮುಂದಿಟ್ಟರು.
ನಿಯೋಗದ ಮನವಿಯನ್ನು ಸಹನೆಯಿಂದಲೇ ಆಲಿಸಿದ ಸಚಿವ ಮುರುಗೇಶ್ ನಿರಾಣಿ, ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು, ಕಾನೂನಿನ ವ್ಯಾಪ್ತಿಯಲ್ಲಿ ಈಡೇರಿಸಬಹುದಾದ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಭರವಸೆ ನೀಡಿದರು.
ನಿಯೋಗದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ಗೌರವಾಧ್ಯಕ್ಷ ದತ್ತಾತ್ರಿ.ಎಸ್, ಅಧ್ಯಕ್ಷ ಸಂಜೀವ ಹಟ್ಟಿಹೊಳಿ, ಉಪಾಧ್ಯಕ್ಷರಾದ ಡಿ.ಸಿದ್ದರಾಜು, ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಹಾಜರಿದ್ದರು.