ಬೆಂಗಳೂರು:ವೇತನದಲ್ಲಿ ತಾರತಮ್ಯ ಸರಿಪಡಿಸಲು ಸಾಕಷ್ಟು ಸಲ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಬಡ್ತಿ ಪಡೆದ ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ, ನಮ್ಮ ಸಮಸ್ಯೆ ಬಗೆಹರಿದಿಲ್ಲ. ಬಿಇಡಿ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿಗಳಾದ ಎಂಎ ,ಎಂಎಸ್ಸಿ ಪದವಿಗಳನ್ನು ಪಡೆದ ಕಾರಣದಿಂದಾಗಿ ಪದವಿಪೂರ್ವ ಕಾಲೇಜುಗಳಿಗೆ ಉಪನ್ಯಾಸಕರಾಗಿ ಬಡ್ತಿ ನೀಡಲಾಗಿದೆ. ಬಡ್ತಿ ಪಡೆಯದೇ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಶಿಕ್ಷರು ಬಡ್ತಿ ಉಪನ್ಯಾಸಕರಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೆ, ಬಡ್ತಿ ಉಪನ್ಯಾಸಕರು, ಉಪನ್ಯಾಸಕ ವೃಂದಕ್ಕೆ ಪದೋನ್ನತಿ ಪಡೆದರೂ ಸಹ ಮುಂಬಡ್ತಿ ವೇತನ ಶ್ರೇಣಿಗಳನ್ನು ಪಡೆಯದೇ ಕಡಿಮೆ ವೇತನ ಪಡೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
10,15, 20, 25, 30 ವರ್ಷದ ಸೇವಾವಧಿಗೆ ನಿರಂತರವಾಗಿ ಕಾಲಮಿತಿ ಬಡ್ತಿಗಳನ್ನು ನೀಡಬೇಕು. ಇಲ್ಲಾವಾದರೆ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕಾರವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ, ನಮ್ಮನ್ನು ವಾಪಸ್ ಪ್ರೌಢ ಶಾಲೆಗೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಸರ್ಕಾರಿ ಬಡ್ತಿ ಪ್ರೌಢ ಶಾಲಾ ಶಿಕ್ಷಕರು ಸಹ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದ್ದಾರೆ. ಹಿರಿತನದ ಆಧಾರದ ಮೇಲೆ ಬಡ್ತಿ ಪಡೆಯದೇ, ವಿದ್ಯಾರ್ಹತೆ ಆಧಾರದ ಮೇಲೆ ಬಡ್ತಿ ಪಡೆದುಕೊಂಡಿದ್ದೇವೆ. ಹೀಗೆ ಬಡ್ತಿ ಪಡೆದ ನಮಗೆ ಕಾಲಮಿತಿಯಲ್ಲಿ ಬಡ್ತಿ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಸಿ ಎಂಡ್ ಆರ್ ನಿಯಮ ಇರುವುದೇ ಹೀಗೆ ಅಂತ ಹೇಳಿ ನಮ್ಮನ್ನು ಕೈ ಬಿಟ್ಟಿದ್ದಾರೆ. ಶಿಕ್ಷಣ ಸಚಿವರು ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳ್ತಿದ್ದಾರೆ ಎಂದು ಸಂಕಷ್ಟ ತೊಡಿಕೊಂಡಿದ್ದಾರೆ.