ಬೆಂಗಳೂರು:ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿ ಸಿಇಟಿ ಬರೆದಿರುವ ಅಭ್ಯರ್ಥಿಗಳು ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್. ಡಿ ಸಂಖ್ಯೆಯನ್ನು ಸರಿಪಡಿಸಿಕೊಳ್ಳಲು ನೀಡಲಾಗಿದ್ದ ಗಡುವು ಮುಕ್ತಾಯಗೊಂಡಿದ್ದು ಜೂನ್ 15 ರಂದು ಸಿಇಟಿ ಫಲಿತಾಂಶ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಆದರೆ ದಿನಾಂಕ ಮತ್ತು ಸಮಯದ ಪ್ರಕಟಣೆಯನ್ನು ಇನ್ನು ಅಧಿಕೃತವಾಗಿ ಪ್ರಕಟ ಮಾಡಿಲ್ಲ.
ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿ 2.6 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಕ್ಕೆ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ಜೂನ್ 12 ರಂದೇ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿತ್ತಾದರೂ ಸಿಇಟಿ ಬರೆದಿದ್ದ 2.6 ಲಕ್ಷ ಅಭ್ಯರ್ಥಿಗಳ ಪೈಕಿ 80 ಸಾವಿರಕ್ಕೂ ಹೆಚ್ಚು ಮಂದಿ ಆರ್.ಡಿ ಸಂಖ್ಯೆಯನ್ನು ತಪ್ಪಾಗಿ ಅರ್ಜಿಯಲ್ಲಿ ನಮೂದಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಅದರ ತಿದ್ದುಪಡಿಗೆ ಜೂನ್ 7ರಿಂದ 12ರವರೆಗೆ ಕೊನೆಯ ಅವಕಾಶ ನೀಡಿ ಫಲಿತಾಂಶ ಪಕಟ ದಿನಾಂಕವನ್ನು ಮುಂದೂಡಿಕೆ ಮಾಡಿಕೊಂಡಿತ್ತು.
ಇದರ ಜೊತೆಗೆ ಕೆಲವರು ಆದಾಯ ಪ್ರಮಾಣ ಪತ್ರದ ಬದಲು ಇಡಬ್ಲ್ಯುಎಸ್ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಸಿಇಟಿ ನಿಯಮಗಳ ಪ್ರಕಾರ ಇದಕ್ಕೆ ಮನ್ನಣೆ ಇಲ್ಲ. ಆದ್ದರಿಂದ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್‌ನಲ್ಲಿ ಜೂನ್ 12ರ ನಿಗದಿತ ಕಾಲಮಿತಿಯೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಸೂಚಿಸಲಾಗಿತ್ತು ಅದರಂತೆ ಆರ್‌ಡಿ ಸಂಖ್ಯೆಗಳು ತಾಳೆಯಾಗದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.
ಇಂದು ಬೆಳಗ್ಗೆ 11 ಗಂಟೆಗೆ ಸಮಯಾವಕಾಶ ಮುಕ್ತಾಯವಾಗಿದ್ದು, ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾತಿ ಬಯಸಿ ಸಿಇಟಿ ಬರೆದಿರುವ ಅಭ್ಯರ್ಥಿಗಳು ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್. ಡಿ ಸಂಖ್ಯೆಯನ್ನು ಸರಿಪಡಿಸಿಕೊಳ್ಳದಿದ್ದರೆ ಅಂತಹ ವಿದ್ಯಾರ್ಥಿಗಳ ಮೀಸಲಾತಿ ಸೌಲಭ್ಯಗಳು ರದ್ದಾಗಿ, ಜನರಲ್ ಮೆರಿಟ್ ಕೋಟಾದಡಿ ಬರಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.