ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾನ ದಿನದಂದು ಮೆಟ್ರೋ ರೈಲು ಓಡಾಟದ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ನಮ್ಮ ಮೆಟ್ರೋ ತಿಳಿಸಿದೆ. ಮೇ 10 ರಂದು ತಡರಾತ್ರಿಯ ಸೇವಾವಧಿ ವಿಸ್ತರಣೆ ಮಾಡಲಾಗಿದೆ. ಅಂದು ರಾತ್ರಿ 11 ಗಂಟೆಯ ಬದಲಾಗಿ ಮಧ್ಯರಾತ್ರಿ 12.05 ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಗಳಿಂದ ಕೊನೆಯ ರೈಲುಗಳು ಹೊರಡಲಿವೆ ಎಂದು ಮಾಹಿತಿ ನೀಡಿದೆ.
ಸಾಮಾನ್ಯ ದಿನಗಳಲ್ಲಿ ನಿತ್ಯ ರಾತ್ರಿ 11.30ಕ್ಕೆ ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಹಾಗೂ ರೇಷ್ಮೆ ಸಂಸ್ಥೆ ಕಡೆಗೆ ಹೊರಡುತ್ತವೆ. ಆದರೆ, ಚುನಾವಣೆ ದಿನ ದೂರದ ಊರುಗಳಿಂದ ಮತದಾನ ಮುಗಿಸಿ ಸಾಕಷ್ಟು ಮಂದಿ ಆಗಮಿಸುತ್ತಾರೆ. ಈ ಹಿನ್ನೆಲೆ 1 ಗಂಟೆ 5 ನಿಮಿಷಗಳ ಕಾಲ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ. ಈ ಹಿನ್ನಲೆಯಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌ನಿಂದ ಕೂಡ ಹೊರಡುವ ಎಲ್ಲ ಕೊನೆಯ ರೈಲುಗಳು ಸಮಯ ರಾತ್ರಿ 12.35ಕ್ಕೆ ನಿಗದಿ ಪಡಿಸಲಾಗಿದೆ ಎಂದಿದೆ.
ಗುರುವಾರ ಎಂದಿನಂತೆ ಬೆಳಗ್ಗೆ 5 ಗಂಟೆಗೆ ಕೊನೆಯ ನಿಲ್ದಾಣಗಳಿಂದ ರೈಲು ಸೇವೆ ಆರಂಭವಾಗಲಿದೆ ಮತ್ತು ಮೆಜೆಸ್ಟಿಕ್‌ನಿಂದ ಮೊದಲ ರೈಲು 5.30ಕ್ಕೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.