ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ದಲಿತರಿಗೆ ಸಿಎಂ ಸ್ಥಾನ ಕೇಳುವ ಸಮಯ ಬಂದಾಗ ಕೇಳುತ್ತೇವೆ: ಛಲವಾದಿ ನಾರಾಯಣಸ್ವಾಮಿ - ದಲಿತರಿಗೆ ಸಿಎಂ ಸ್ಥಾನ

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾದ್ಯಕ್ಷ ಛಲವಾದಿ ನಾರಾಯಣಸ್ವಾಮಿ ಠವರು ಕಾಂಗ್ರೆಸ್​ ವಿರುದ್ಧ ಆರೋಪಗಳ ಸುರಿಮಳೆಗರೆದಿದ್ದಾರೆ.

BJP leader Chalavadi Narayanaswamy spoke to reporters.
ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

By

Published : Apr 26, 2023, 9:40 PM IST

ಬೆಂಗಳೂರು:70 ವರ್ಷ ಆಳಿದ ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ಮಾಡಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಮುಖ್ಯಮಂತ್ರಿ ಸ್ಥಾನ ಕೇಳುವ ಸಮಯ ಬಂದಾಗ ಖಂಡಿತ ಕೇಳುತ್ತೇವೆ ಎಂದ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾದ್ಯಕ್ಷ ಛಲವಾದಿ ನಾರಾಯಣಸ್ವಾಮಿ ದಲಿತ ಸಿಎಂ ಚರ್ಚೆ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ನಿಮ್ಮ ಶಾಸಕನ ಮನೆ ಮೇಲೆ ಬೆಂಕಿ ಹಾಕಿದರೂ ನೀವು ರಕ್ಷಣೆ ನೀಡಿದಿರಾ? ಅವರಿಗೆ ಟಿಕೆಟ್ ಕೂಡ ನೀಡಿಲ್ಲ. ಸಿದ್ದರಾಮಯ್ಯ ದಲಿತರನ್ನು ಮುಗಿಸಿಬಿಟ್ಟರು. ಜಿ ಪರಮೇಶ್ವರ ಅವರನ್ನು ಮುಗಿಸಿದರು. ಕಾಂಗ್ರೆಸ್ ದಲಿತರನ್ನು ಮುಗಿಸಿತು. ಬಸವಲಿಂಗಪ್ಪ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ವೀರಪ್ಪ ಮೊಯ್ಲಿ ಮಾಡಿದರು. ಅದೇ ನೋವಲ್ಲಿ ಬಸವಲಿಂಗಪ್ಪ ನಿಧನರಾದರು ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ನಮ್ಮಲ್ಲೂ ಸಮಯ ಬಂದಾಗ ದಲಿತರು ಮುಖ್ಯಮಂತ್ರಿ ಆಗುವ ಅವಕಾಶ ಇದೆ. ನಾವು ಅಧಿಕಾರಕ್ಕೆ ಬರ್ತಾ ಇದ್ದಂತೆ ಡಿಸಿಎಂ ಮಾಡಿದ್ದೇವೆ ಸದ್ಯ ಬೊಮ್ಮಾಯಿ‌ ಮುಖ್ಯಮಂತ್ರಿ ಇದ್ದಾರೆ. ದಲಿತರಿಗೆ ಮುಖ್ಯಮಂತ್ರಿ ಕೇಳುವ ಸಮಯ ಬಂದಾಗ ಕೇಳುತ್ತೇವೆ.ಎಲ್ಲಿ ಕೇಳಬೇಕೊ ಅಲ್ಲಿ ಕೇಳುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ 3-4 ದಿನದಿಂದ ಯಲಹಂಕದಿಂದ ಬೆಳಗಾವಿ ವರೆಗೆ 20 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮತ್ತು ಸಭೆಗಳಲ್ಲಿ ಭಾಗಿಯಾಗಿದ್ದೇನೆ. ಜನರು ಅಭೂತಪೂರ್ವ ಸ್ವಾಗತ ಮಾಡಿದ್ದಾರೆ. ತಳಮಟ್ಟದಲ್ಲಿ ಕಾರ್ಯಕರ್ತರಿಂದ ಹಿಡಿದು ಸಾರ್ವಜನಿಕರು ಬಿಜೆಪಿ ಬೆಂಬಲಿಸುವ ಸಂಕಲ್ಪ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿಗೆ ಶೇ.15ರಿಂದ 17, ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ 7ರಷ್ಟು ಮೀಸಲಾತಿ ಹೆಚ್ಚಿಸಿರುವ ಸರ್ಕಾರದ ನಿರ್ಧಾರವನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಮೀಸಲಾತಿ ಹೆಚ್ಚಿಸದೆ ಕಾಂಗ್ರೆಸ್ ಮೂಗಿಗೆ ತುಪ್ಪ ಸವರುತ್ತಿತ್ತು. ಬಸವರಾಜ ಬೊಮ್ಮಾಯಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ ನಂತರ ಮೀಸಲಾತಿ ಏರಿಕೆಯಾಗಿದೆ. ದಲಿತ ಸಮುದಾಯಗಳು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಿ ಮೋಸ ಮಾಡಿದರು.ಮೀಸಲಾತಿ ಹೆಚ್ಚಿಸಲು ಆಸಕ್ತಿ ವಹಿಸಲಿಲ್ಲ. ಬಿಜೆಪಿ ಸರ್ಕಾರ ಬಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಭೂರಹಿತ ದಲಿತರಿಗೆ 20ರಿಂದ 25 ಲಕ್ಷ ರೂ. ನೀಡಿ ಜಮೀನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಅಮರ ಜ್ಯೋತಿ ಯೋಜನೆಯಡಿ 70 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ವಿವಿಧ ನಿಗಮಗಳಿಗೆ 750 ಕೋಟಿ ರೂಪಾಯಿ ನೀಡಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ 675 ಕೋಟಿ ರೂ. ನೇರವಾಗಿ ವರ್ಗಾಯಿಸಲಾಗಿದೆ. ಇದರಿಂದ ಸೋರಿಕೆಯೂ ತಪ್ಪಿದೆ ಎಂದರು.

15,000 ಸಫಾಯಿ ಕರ್ಮಚಾರಿಗಳ ಸೇವೆಯನ್ನು ಖಾಯಂಗೊಳಿಸಲಾಗಿದೆ. ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. 51 ಸಾವಿರ ಲಂಬಾಣಿ ಕುಟುಂಬಗಳಿಗೆ ಪ್ರಧಾನಿಯವರು ಹಕ್ಕುಪತ್ರಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಸಂವಿಧಾನ ತೊಂದರೆಗೆ ಸಿಲುಕಿದ್ದು, ರಕ್ಷಿಸಬೇಕಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಏಳು ದಶಕಗಳಿಂದ ಸಂವಿಧಾನ ತೊಂದರೆಯಲ್ಲಿತ್ತು. ತೊಂದರೆಯಿಂದ ಬಿಡಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು. ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದರಿಂದ ಅಲ್ಲಿ ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮೀಸಲಾತಿ ಸೌಲಭ್ಯ ಪಡೆಯುವಂತಾಗಿದೆ. ಬಿಜೆಪಿ ಅಪೇಕ್ಷೆ, ಮೀಸಲಾತಿಗೆ ಒತ್ತು ಕೊಡುವುದೇ ಹೊರತು, ತೆಗೆದು ಹಾಕುವುದಲ್ಲ ಎಂದು ವಿವರಿಸಿದರು.

ಬಿಜೆಪಿ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚ ಕ್ಷೇತ್ರಗಳನ್ನು ಸ್ಮಾರಕಗಳನ್ನಾಗಿ ಅಭಿವೃದ್ಧಿ ಪಡಿಸಿದೆ. ಕರ್ನಾಟಕದಲ್ಲಿ ಅವರು ಪಾದಸ್ಪರ್ಶ ಮಾಡಿದ 10 ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಮೂಲೆಗುಂಪು ಮಾಡಿದೆ. ಅವರ ಸ್ಮಾರಕಕ್ಕೆ ಜಾಗವನ್ನೂ ನೀಡಿರಲಿಲ್ಲ. ಅಂಬೇಡ್ಕರ್ ಅವರನ್ನು ಗೌರವಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‍ಗೆ ದಲಿತ ಸಂರಕ್ಷಕ ಎನ್ನುವ ಹಣೆಪಟ್ಟಿ ಕಿತ್ತುಹೋಗಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರೂ, ಅಖಂಡ ಶ್ರೀನಿವಾಸಮೂರ್ತಿಗೆ ನ್ಯಾಯ ಒದಗಿಸಲಾಗಿಲ್ಲ. ಪರಮೇಶ್ವರ್ ಅವರನ್ನು ಅವರದೇ ಕ್ಷೇತ್ರದಲ್ಲಿ ಸೋಲಿಸಿತ್ತು. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ದಲಿತ ಸಮುದಾಯ ಬಿಜೆಪಿ ಬೆಂಬಲಿಸುತ್ತಿದ್ದು, 130 ಸ್ಥಾನಗಳೊಂದಿಗೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಜಯನಗರ ಬಿಜೆಪಿ ಅಭ್ಯರ್ಥಿ ಸಿ. ಕೆ. ರಾಮಮೂರ್ತಿ ಮಾತನಾಡಿ, ವಿಜಯ್‍ಕುಮಾರ್ ಅವರು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಿದ್ದ ಜಯನಗರ, ಹತ್ತು ವರ್ಷಗಳ ಹಿಂದಕ್ಕೆ ಹೋಗಿದೆ. ಈಗಿನ ಶಾಸಕರ ನಿರ್ಲಕ್ಷದಿಂದ ಜಯನಗರ ಕಾಂಪ್ಲೆಕ್ಸ್ ಸಮಸ್ಯೆಗಳ ಕೇಂದ್ರವಾಗಿದೆ. ಕ್ಷೇತ್ರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ಆರೋಪಿಸಿದರು.

ಇದನ್ನೂಓದಿ:ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ

ABOUT THE AUTHOR

...view details