ಬೆಂಗಳೂರು : ರಾಜ್ಯ ಸರ್ಕಾರವು ತಿಗಳ ಕ್ಷತ್ರಿಯ ಜನಾಂಗವನ್ನು ಕಡೆಗಣಿಸಿದೆ. ಎಲ್ಲ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಮಾಡಲಾಗಿದೆ. ಆದರೆ ತಿಗಳ ಕ್ಷತ್ರಿಯ ಸಮುದಾಯಕ್ಕೆ ನಿಗಮ ಮಂಡಳಿ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ. ಆರ್. ರಮೇಶ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಿರುವ ನಿಗಮ ಮಂಡಳಿಯಲ್ಲಿ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ಕಳೆದ ಬಜೆಟ್ ನಲ್ಲಿ ತಿಗಳ ಸಮುದಾಯಕ್ಕೆ 400 ಕೋಟಿ ಹಣ ಇಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಒಂದು ರೂಪಾಯಿಯನ್ನೂ ಇದುವರೆಗೂ ಖರ್ಚು ಮಾಡಿಲ್ಲ. ಮಾರ್ಚ್ 14ರಂದು ತಿಗಳ ಸಮುದಾಯದ ಜಾಗೃತಿ ಸಭೆಯನ್ನು ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದೇವೆ. ಈ ಜಾಗೃತಿ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರಲಿದ್ದಾರೆ ಎಂದು ತಿಳಿಸಿದರು.
ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ :ಜೊತೆಗೆ ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ಎಂದು ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ತಿಗಳ ಸಮುದಾಯಕ್ಕೆ ಇರುವ ಕೆಲವು ಕಾರ್ಯಕ್ರಮಗಳನ್ನು ಈ ಸರ್ಕಾರ ರದ್ದು ಮಾಡಿದೆ. ಅದಕ್ಕಾಗಿ ತಿಗಳ ಕ್ಷತ್ರಿಯ ನಡೆ ಕಾಂಗ್ರೆಸ್ ಕಡೆ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯದ 40 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಿಗಳ ಜನಾಂಗದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಓದಿದ್ದರು ಎಂದು ಹೇಳಿದರು.
ಇಂದು ತಿಗಳ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ಸಂದೇಶವನ್ನು ಪಿ.ಆರ್. ರಮೇಶ್ ನೀಡಿದ್ದಾರೆ. ಇದಕ್ಕೆ ಕೆಲವರು ಸಮ್ಮತಿ ಸೂಚಿಸಿದ್ದಾರೆ. ಆದರೆ ಸಂಪೂರ್ಣ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಲ್ಲುವುದೇ ಎನ್ನುವುದನ್ನು ಕಾದು ನೋಡಬೇಕಿದೆ. ಯಾವ ಕ್ಷೇತ್ರದಲ್ಲಿ ತಿಗಳ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೋ, ಅಲ್ಲಿ ತಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.