ಬೆಂಗಳೂರು:ರಾಜ್ಯದ ಕೆಲವೆಡೆ ಮೋಡ ಕವಿದ ವಾತಾವರಣವಿದ್ದು ಹಾಗೂ ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಹಲವೆಡೆ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮೇ 14 ಮತ್ತು ಮೇ 15ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ರಾತ್ರಿ ಸುಮಾರು 10 ಗಂಟೆಯಿಂದ ಶುರುವಾದ ಮಳೆ ಎಡೆ ಬಿಡದೆ ಆರ್ಆರ್ ನಗರ, ಬಿಟಿಎಂ ಲೇಔಟ್, ರಾಜಾಜಿನಗರ, ಮಲ್ಲೇಶ್ವರಂ, ಬಸವನಗುಡಿ, ಯಶವಂತಪುರ ಸೇರಪಿದಂತೆ ಇತರೆಡೆ ಸುರಿಯಿತು. ಕೆಆರ್ ಮಾರ್ಕೆಟ್, ಕಾರ್ಪೊರೇಷನ್ ವೃತ್ತ, ಲಾಲ್‌ಬಾಗ್, ಶಾಂತಿನಗರದಲ್ಲಿ ಅತ್ಯಧಿಕ ಮಳೆಯಾಗಿದೆ.
ಮಳೆ ಮುನ್ಸೂಚನೆ ಕುರಿತು ತಿಳಿಸಿದ ಹವಾಮಾನ ಇಲಾಖೆಯ ಸಿಎಸ್ ಪಾಟೀಲ್ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶ ಹಾಗೂ ಚಿತ್ರದುರ್ಗದ ಕೆಲವೆಡೆ ಮೇ 14ರಿಂದ ಮೇ 15ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31.9 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 20.7 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ.
ಉಳಿದಂತೆ, ಕಲಬುರ್ಗಿಯಲ್ಲಿ ಗರಿಷ್ಠ ಉಷ್ಣಾಂಶ 39.1 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 27.3 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 37.4 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 27 ಡಿಗ್ರಿ, ವಿಜಯಪುರ ಗರಿಷ್ಠ 36.2 ಡಿಗ್ರಿ ಹಾಗೂ ಕನಿಷ್ಠ 24 ಡಿಗ್ರಿ, ಮೈಸೂರಿನಲ್ಲಿ ಗರಿಷ್ಠ 35 ಮತ್ತು ಕನಿಷ್ಠ 25.1 ಡಿಗ್ರಿ, ಬಳ್ಳಾರಿಯಲ್ಲಿ ಗರಿಷ್ಠ 34.2 ಡಿಗ್ರಿ ಹಾಗೂ ಕನಿಷ್ಠ 25.1 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ.