ಬೆಂಗಳೂರು :ಕಾಸು ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಕೋಪಗೊಂಡ ಪುಂಡರ ತಂಡದ ಸದಸ್ಯರು ಮನಬಂದಂತೆ ಹಲ್ಲೆ ಮಾಡಿ ಅಂಗಡಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಮದ್ಯ ಸೇವಿಸಿ ದುಷ್ಕೃತ್ಯ ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ. ಬೈಂದೂರು ಮೂಲದ ಮಂಜುನಾಥ್ ಶೆಟ್ಟಿ ಹಲ್ಲೆಗೊಳಗಾಗಿದ್ದಾರೆ. ಇವರು ನೀಡಿದ ದೂರು ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರನ್ನು ಬಂಧಿಸಿದ್ದಾರೆ.
ಕಳೆದ 13 ವರ್ಷಗಳಿಂದ ಜೆ.ಪಿ.ನಗರದ 24ನೇ ಮುಖ್ಯರಸ್ತೆಯಲ್ಲಿ ಮಂಜುನಾಥ್ ಕಾಂಡಿಮೆಟ್ಸ್ ನಡೆಸುತ್ತಿದ್ದಾರಂತೆ. ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಇವರ ಅಂಗಡಿಗೆ ಬಂದಿದ್ದ ಆರೇಳು ಮಂದಿ ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ಹಣ ಕೊಡುವಂತೆ ತಿಳಿಸಿದಾಗ ಸಿಟ್ಟಾದ ಕಿಡಿಗೇಡಿಗಳು ಮಂಜುನಾಥ್ ಮೇಲೆ ಮುಷ್ಠಿ ಹಾಗೂ ರಾಡ್‌ನಿಂದ ಹೊಡೆದಿದ್ದಾರೆ. ರಸ್ತೆಗೆಳೆದು ತಂದು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ವಿವರ:ಸೋಮವಾರ ಬೆಳಗ್ಗೆ ಅಂದಾಜು 30 ರಿಂದ 40 ವರ್ಷ ಪ್ರಾಯದ ಆರೇಳು ಮಂದಿ ಹುಡುಗರು ಮದ್ಯದ ಅಮಲಿನಲ್ಲಿ ಅಂಗಡಿಯೊಳಗೆ ನುಗ್ಗಿದ್ದಾರೆ. ಸಿಗರೇಟ್ ಬಂಡಲಿಗೆ ಕೈ ಹಾಕಿ ತೆಗೆದುಕೊಳ್ಳಲು ಯತ್ನಿಸಿದರು. ಇದನ್ನು ಪ್ರಶ್ನಿಸಿದಾಗ ರಾಡ್ ಮತ್ತು ಮುಷ್ಟಿಯಿಂದ ಗುದ್ದಿ ಹಲ್ಲೆ ನಡೆಸಿದರು. ಇದಾದ ಬಳಿಕ, ನನ್ನನ್ನು ರಸ್ತೆಗೆ ಎಳೆದು ತಂದು ಕಾಲಿನಿಂದ ತುಳಿದರು. ರಸ್ತೆಯಲ್ಲಿದ್ದ ಸಲಾಕೆಯಿಂದಲೂ ನನ್ನ ಎದೆ, ತಲೆ ಹಾಗು ಹೊಟ್ಟೆಗೆ ಹೊಡೆದರು. ಮೂಗು ಮತ್ತು ತಲೆಯಿಂದ ರಕ್ತ ಸುರಿಯಿತು ಎಂದು ಮಂಜುನಾಥ್ ಶೆಟ್ಟಿ ವಿವರಿಸಿದ್ದಾರೆ.