ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ: ಜನರಿಗೆ ಸಿಗಲಿದೆಯಾ ಬಂಪರ್ ಕೊಡುಗೆ!? - ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಗುರುವಾರ ಬೆಳಗ್ಗೆ ನಡೆಯಲಿರುವ ಸಮಾರಂಭದಲ್ಲಿ 'ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ - ಇದು ನಮ್ಮ ಸಂಕಲ್ಪ 'ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ, ತಮ್ಮ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು ಮುಖ್ಯಮಂತ್ರಿಗಳು ಜನರಿಗೆ ವಿವರಿಸಲಿದ್ದಾರೆ.

ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ
ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ

By

Published : Jul 26, 2022, 4:54 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ರೈತರು, ಬಡ-ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆ ನೀಡಲು ಸರ್ಕಾರ ಮುಂದಾಗಿದೆ.

ಜುಲೈ 28 ರಂದು ಸಾವಿರಾರು ಕೋಟಿ ರೂ. ಘೋಷಿಸಲಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದು, ರೈತರು, ಬಡ-ಮಧ್ಯಮ ವರ್ಗದವರಿಗೆ ಅನುಕೂಲ ಒದಗಿಸುವ ಹಲವು ಪ್ರಮಖ ಇಲಾಖೆಗಳ ಮೂಲಕ ಈ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಗುರುವಾರ ಬೆಳಗ್ಗೆ ನಡೆಯಲಿರುವ ಸಮಾರಂಭದಲ್ಲಿ 'ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ - ಇದು ನಮ್ಮ ಸಂಕಲ್ಪ 'ಎಂಬ ಪುಸ್ತಕ ಬಿಡುಗಡೆ ಮಾಡಿ, ತಮ್ಮ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು ಮುಖ್ಯಮಂತ್ರಿಗಳು ಜನರಿಗೆ ವಿವರಿಸಲಿದ್ದಾರೆ.

ಸರ್ಕಾರಕ್ಕೆ ಒಂದು ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಸಹಕಾರ, ಜಲಸಂಪನ್ಮೂಲ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಎಂಟು ಹೊಸ ಘೋಷಣೆಗಳನ್ನು ಬಸವರಾಜ ಬೊಮ್ಮಾಯಿ ಮಾಡಲಿದ್ದಾರೆ.

ಹೊಸ ಘೋಷಣೆ :ಮುಂದಿನ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಸರ್ಕಾರ 2023-24 ರ ರಾಜ್ಯ ಬಜೆಟ್ ಮಂಡಿಸುವುದು ಸಹ ಸಂಪ್ರದಾಯವಾದರೂ ವಿದಾನಸಭಾ ಚುನಾವಣೆಗಳು ಹತ್ತಿರ ಬಂದ ಸಂದರ್ಭದಲ್ಲಿ ಸರ್ಕಾರ ಮಾಡುವ ಹೊಸ ಘೋಷಣೆಗಳ ಬಗ್ಗೆ ಜನ ಮುಂಚಿತವಾಗಿಯೇ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.

ಆದರೆ, ಜನ ನಿರೀಕ್ಷೆ ಮಾಡುವ ಮುನ್ನವೇ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಹೊಸ ಯೋಜನೆಗಳನ್ನು ಘೋಷಿಸಿದರೆ ಅದು ಜನರ ನೆನಪಿನಲ್ಲಿರುತ್ತದೆ ಎಂಬುದು ಮುಖ್ಯಮಂತ್ರಿಗಳ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇದು ಬಜೆಟ್ ಅಲ್ಲವಾದರೂ ತಾಂತ್ರಿಕವಾಗಿ ಬಜೆಟ್ ಸ್ವರೂಪವನ್ನು ಹೊಂದಿರಲಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ಮಿನಿ ಬಜೆಟ್ ಎಂದು ಬಣ್ಣಿಸಲಾಗುತ್ತಿದೆ.

ಹೆಚ್ಚಿದ ಆದಾಯ:ಕೊರೊನಾದಿಂದ ಚೇತರಿಸಿಕೊಂಡ ರಾಜ್ಯ ಇದೀಗ ಪ್ರಗತಿಯ ಏರುಗತಿಯಲ್ಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡ ಹಲವು ಪರಿಣಾಮಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರತೊಡಗಿದೆ. ವಾಣಿಜ್ಯ ತೆರಿಗೆ, ಅಬಕಾರಿ, ಕಂದಾಯ ಸೇರಿದಂತೆ ಸರ್ಕಾರದ ಪ್ರಮುಖ ಇಲಾಖೆಗಳು ನಿರೀಕ್ಷೆ ಮೀರಿದ ಆದಾಯ ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸರ್ಕಾರ ಮಂಡಿಸಿರುವ 2023-24 ನೇ ಸಾಲಿನ ಬಜೆಟ್ ಕೊರತೆ ಬಜೆಟ್ ಅನ್ನಿಸಿಕೊಳ್ಳುವ ಬದಲು ಉಳಿತಾಯ ಬಜೆಟ್ ಆಗಲಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

ಕಂದಾಯ ಇಲಾಖೆಯ ವಾರ್ಷಿಕ ಗುರಿ 15 ಸಾವಿರದಷ್ಟಿತ್ತು.ಆದರೆ, ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ 5 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಸಂಗ್ರಹವಾಗಿದೆ. ಈ ಮಧ್ಯೆ ಆಷಾಢ ಮಾಸದ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳು ಕುಂಠಿತವಾಗಿದ್ದು, ಇಷ್ಟಾದರೂ ನೋಂದಣಿಗೆ ಶೇ. ಹತ್ತರಷ್ಟು ರಿಯಾಯಿತಿ ನೀಡಿದ ಸರ್ಕಾರದ ನಿರ್ಧಾರ ದೊಡ್ಡ ಪರಿಣಾಮ ಬೀರಿದೆ.

ಈ ಹಿನ್ನೆಲೆಯಲ್ಲಿ ನೋದಣಿ ಮೇಲಿನ ರಿಯಾಯಿತಿಯನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಇದೇ ರೀತಿ ಅಬಕಾರಿ ಇಲಾಖೆಯ ಆದಾಯವೂ ನಿರೀಕ್ಷೆಗಿಂತ ಸಾವಿರಾರು ಕೋಟಿ ರೂ.ಹೆಚ್ಚುವರಿ ಆದಾಯ ಹರಿದು ಬಂದಿದೆ. ವಾಣಿಜ್ಯ ತೆರಿಗೆ ಇಲಾಖೆ ಕೂಡಾ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಬಂಪರ್ ತೆರಿಗೆ ಸಂಗ್ರಹಿಸಿದ್ದು, ಇದರ ಪರಿಣಾಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆರ್ಥಿಕ ಸಬಲತೆ ಸಾಧಿಸಿದೆ.

ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್​ಟಿ ಬಾಕಿ ನೀಡದೇ ಇದ್ದರೂ ಸ್ವಂತ ಸಂಪನ್ಮೂಲ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಡಿನ ರೈತರು, ಬಡ-ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆ ನೀಡಲು ತೀರ್ಮಾನಿಸಿದ್ದಾರೆ. ಬ್ಯಾಂಕ್ವೆಟ್ ಹಾಲ್​​ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸುವಂತೆ ಶಾಸಕರು,ಸಚಿವರು,ಅಧಿಕಾರಿಗಳು ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದ್ದು,ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಸಾಧನೆಗಳ ವಿವರಗಳನ್ನೂ ನೀಡಲಿದ್ದಾರೆ.

ಇದನ್ನೂ ಓದಿ: ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ‌ಪಾಲಿಟಿಕ್ಸ್​: ಮಾಜಿ ಸಚಿವ ಕಿಮ್ಮನೆ ರತ್ನಾಕರ್- ಮಂಜುನಾಥ ಗೌಡರ ನಡುವೆ ಕಲಹ

ABOUT THE AUTHOR

...view details