ಬೆಂಗಳೂರು:ನಗರದಪ್ರತಿಷ್ಠಿತ ಕಾಲೇಜಿನ ಮೂವರು ವಿದ್ಯಾರ್ಥಿಗಳು ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ಕೆಲ ವಿದ್ಯಾರ್ಥಿಗಳು ಉದ್ಧಟತನ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ್ದು, ಘಟನೆ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ 153 - ಜನಾಂಗೀಯ ದ್ವೇಷಕ್ಕೆ ಪ್ರಚೋದನೆ ಹಾಗೂ 505(1)B - ದೇಶದ ವಿರುದ್ಧ ಕೆಲಸ ಮಾಡಲು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಘೋಷಣೆ ಕೂಗುವ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂವರನ್ನು ಸಸ್ಪೆಂಡ್ ಮಾಡಿದ್ದ ಕಾಲೇಜು ಆಡಳಿತ ಮಂಡಳಿ, ಬಳಿಕ ಮಾರತ್ತಹಳ್ಳಿ ಠಾಣೆಗೆ ದೂರು ನೀಡಿತ್ತು.
ಕೂಡಲೇ ಮೂವರನ್ನೂ ವಶಕ್ಕೆ ಪಡೆದಿದ್ದ ಮಾರತ್ತಹಳ್ಳಿ ಪೊಲೀಸರು ತಡರಾತ್ರಿಯವರೆಗೂ ವಿಚಾರಣೆ ಕೈಗೊಂಡಿದ್ದಾರೆ. ತನಿಖೆ ವೇಳೆ ಆರೋಪಿಗಳು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ವಿದ್ಯಾರ್ಥಿಗಳ ಮೊಬೈಲ್ ವಶಕ್ಕೆ ಪಡೆದು ಕಳಿಸಿದ್ದ ಮಾರತ್ತಹಳ್ಳಿ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.