ಬೆಂಗಳೂರು: ಇಂದು ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದು, ನಾಲ್ಕನೇ ದಿನವಾದ ಇಂದು ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ಪರೀಕ್ಷೆಗಳು ನಡೆದಿವೆ.
ಸುದ್ದಿಗೋಷ್ಠಿಯಲ್ಲಿ ಇಂದಿನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಸಂಗೀತ ಪರೀಕ್ಷೆಗೆಗಳಿಗೆ ನೋಂದಾಯಿತ 7,91,102 ವಿದ್ಯಾರ್ಥಿಗಳ (ವಿಜ್ಞಾನ-7,90,681, ರಾಜ್ಯಶಾಸ್ತ್ರ-419, ಸಂಗೀತ- 02) ಪೈಕಿ 7,74,729 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.
ಒಟ್ಟಾರೆ ಶೇ. 97.93ರಷ್ಟು ಇಂದು ಹಾಜರಾತಿ ಇದ್ದು, 16,373 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಳೆದ 2018-19ನೇ ಸಾಲಿಗೆ 7,79,993 ವಿದ್ಯಾರ್ಥಿಗಳ ಪೈಕಿ 7,69,778 ವಿದ್ಯಾರ್ಥಿಗಳು ಹಾಜರಾಗಿದ್ದು, 10,215 ವಿದ್ಯಾರ್ಥಿಗಳು ಗೈರಾಗಿದ್ದರು. ಶೇ. 98.69 ಹಾಜರಾತಿ ಇತ್ತು. ರಾಜ್ಯಶಾಸ್ತ್ರ- 4 ಗೈರು, ಸಂಗೀತ ಇಬ್ಬರೂ ಹಾಜರಾಗಿದ್ದಾರೆ ಎಂದು ತಿಳಿಸಿದರು.
ಸಚಿವ ಎಸ್.ಸುರೇಶ್ ಕುಮಾರ್ ಸುದ್ದಿಗೋಷ್ಠಿ ಮೊದಲ ಬಾರಿಗೆ 7,45,033 ಶಾಲಾ ವಿದ್ಯಾರ್ಥಿಗಳು ಹಾಗೂ 20,976 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್ಮೆಂಟ್ ಪ್ರದೇಶಗಳ 2942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 491 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ 3 ವಿದ್ಯಾರ್ಥಿಗಳನ್ನು (ಧಾರವಾಡ-2, ರಾಯಚೂರು-1) ಡಿಬಾರ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1,442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 645 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 53 ವಿದ್ಯಾರ್ಥಿಗಳು ಗೈರಾಗಿದ್ದು, 592 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 12,539 ವಿದ್ಯಾರ್ಥಿಗಳು ಹಾಜರಾಗಿದ್ದರೆ, 105 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದರು.
ಹೋಂ ಕ್ವಾರಂಟೈನ್ ಹಾಗೂ ಕೋವಿಡ್ ಪಾಸಿಟಿವ್ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3,215 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದರು.