ಬೆಂಗಳೂರು:ವೀಸಾ ಇಲ್ಲದೇ ಅಕ್ರಮವಾಗಿ ಬೋಟ್ ಮುಖಾಂತರ ಶ್ರೀಲಂಕಾದಿಂದ ಭಾರತಕ್ಕೆ ನುಸುಳಿ, ಬಳಿಕ ನಗರಕ್ಕೆ ಬಂದಿದ್ದ ಸುಪಾರಿ ಕಿಲ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಜೈ ಪರಮೇಶ್ ಹಾಗೂ ಶ್ರೀಲಂಕಾ ಪ್ರಜೆಗಳಾದ ಕಸನ್ ಕುಮಾರ ಸನಕ, ಅಮಿಲಾ ನೂವಾನ್ ಮತ್ತು ರಂಗಪ್ರಸಾದ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಕಿಲ್ಲರ್ಗಳಿಗೆ ರೌಡಿಶೀಟರ್ ಜೈ ಪರಮೇಶ್ ಆಶ್ರಯ ನೀಡಿದ್ದ. ವೀಸಾ ಪಾಸ್‌ಪೋರ್ಟ್ ಇಲ್ಲದೇ ಬೋಟ್ ಮೂಲಕ ಭಾರತದ ಗಡಿ ಪ್ರವೇಶಿಸಿರುವ ಶ್ರೀಲಂಕಾ ಆರೋಪಿಗಳು ಸೇಲಂನಿಂದ ಬೆಂಗಳೂರು ತಲುಪಿದ್ದರು. ಸದ್ಯ ರೌಡಿಶೀಟರ್ ಮನೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರ ಮೇಲಿವೆ ಹಲವು ಪ್ರಕರಣ:ಕಳೆದ 20 ದಿನಗಳ ಹಿಂದೆ ಭಾರತಕ್ಕೆ ನುಸುಳಿದ್ದ ಶ್ರೀಲಂಕಾ ಪ್ರಜೆಗಳು, ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀಲಂಕಾದಲ್ಲಿ ಈ ಮೂವರ ಮೇಲೆ ಸರಣಿ ಕೊಲೆ ಪ್ರಕರಣ ಇದ್ದು, ಸಿಸಿಬಿ ಪ್ರಾಥಮಿಕ ವಿಚಾರಣೆ ವೇಳೆ ತಮ್ಮ ಅಪರಾಧ ಹಿನ್ನೆಲೆ ಬಗ್ಗೆ ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಕಸನ್ ಕುಮಾರ ಮೇಲೆ ನಾಲ್ಕು ಕೊಲೆ ಪ್ರಕರಣ, ಅಮಿಲಾ ನೂವಾನ್ ಮೇಲೆ ಐದು ಕೊಲೆ ಕೇಸ್ ಹಾಗೂ ರಂಗಪ್ರಸಾದ್ ಮೇಲೆ ಎರಡು ಕೊಲೆ ಮತ್ತು ಎರಡು ಹಲ್ಲೆ ಪ್ರಕರಣ ದಾಖಲಾಗಿದೆ.