ಕರ್ನಾಟಕ

karnataka

ETV Bharat / state

ಬೆಂಗಳೂರಿಂದ ಕಾಣೆಯಾಗಿದ್ದ ಮೂವರು ಚೆನ್ನೈನಲ್ಲಿ ಪತ್ತೆ: ಸಲಿಂಗ ಮದುವೆಗೆ ಸಿದ್ಧತೆ ನಡೆಸಿದ್ದ ಶಾಲಾ ಬಾಲಕಿಯರು! - ಬೆಂಗಳೂರಿಂದ ಕಾಣೆಯಾಗಿದ್ದ ಮೂವರು ಚೆನ್ನೈನಲ್ಲಿ ಪತ್ತೆ

ಕಳೆದ 20 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರಿನ ಮೂವರು ಶಾಲಾ ಬಾಲಕಿಯರನ್ನು ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಹಚ್ಚಿ ಬೆಂಗಳೂರಿಗೆ ಕರೆತಂದಿದ್ದಾರೆ.

three-schoolgirls-who-went-missing-from-bangalore-were-found-in-chennai
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮೂವರು ಶಾಲಾ ಬಾಲಕಿಯರು ಚೆನ್ನೈನಲ್ಲಿ ಪತ್ತೆ

By

Published : Sep 26, 2022, 3:13 PM IST

Updated : Sep 26, 2022, 5:36 PM IST

ಬೆಂಗಳೂರು:ಕಳೆದ 20 ದಿನಗಳ ಹಿಂದೆ ಕಾಣೆಯಾಗಿ ಆತಂಕಕ್ಕೆ‌ ಎಡೆ ಮಾಡಿಕೊಟ್ಟಿದ್ದ ಮೂವರು ಶಾಲಾ ಬಾಲಕಿಯರನ್ನು ಕೊನೆಗೂ ಪುಲಕೇಶಿನಗರ ಪೊಲೀಸರು ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಹಚ್ಚಿ ನಗರಕ್ಕೆ ಕರೆತಂದಿದ್ದಾರೆ. ತಮಿಳುನಾಡಿಗೆ ತೆರಳಿದ್ದ ಮೂವರು ಬಾಲಕಿಯರ ಪೈಕಿ ಇಬ್ಬರು‌ ಪ್ರೀತಿಸಿ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದರು ಎಂಬ ವಿಚಾರ ಗೊತ್ತಾಗಿದೆ.

ಪುಲಕೇಶಿನಗರ‌ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಮೂವರು ವಿದ್ಯಾರ್ಥಿಯರು ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಶಾಲಾ ಹಾಸ್ಟೆಲ್​​ನಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೋರ್ವ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದರು. 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ತಂದೆ-ತಾಯಿ ಇರಲಿಲ್ಲ. 9 ನೇ ತರಗತಿ ಓದುತ್ತಿದ್ದ ಮತ್ತೋರ್ವ ಬಾಲಕಿಗೆ ತಾಯಿ ಇರಲಿಲ್ಲ. ಇಬ್ಬರು ಸಹ ಹಾಸ್ಟೆಲ್​​ನಲ್ಲಿ ಉಳಿದುಕೊಂಡಿದ್ದರು‌. ಇಬ್ಬರು ನಡುವೆ ಕಾಲಕ್ರಮೇಣ ಪ್ರೀತಿ ಮೊಳಕೆ ಒಡೆದಿತ್ತು. ಕಾಣೆಯಾಗಿದ್ದ ಮೂರನೇ ಬಾಲಕಿಗೆ ಓದುವ ವಿಷಯವಾಗಿ ಪೋಷಕರು ಬೈದು ಬೈದಿದ್ದರು‌‌. ಪರಿಣಾಮವಾಗಿ ಮೂವರು ಬಾಲಕಿಯರು ಮಾತನಾಡಿಕೊಂಡು ಊರು ಬಿಡಲು ನಿರ್ಧರಿಸಿದ್ದರು.

ಬಾಲಕಿಯರು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆ

ಸ್ನೇಹಿತೆಯರಿಂದ 21 ಸಾವಿರ ಸಂಗ್ರಹಿಸಿದ ಅಪ್ತಾಪ್ತೆಯರು:ಊರು ಬಿಡಲು ತೀರ್ಮಾನಿಸಿಕೊಂಡಿದ್ದ ಬಾಲಕಿಯರು, ಮನೆಯಲ್ಲಿ ಕಷ್ಟವಿದೆ ಎಂದು ಸ್ನೇಹಿತೆಯರು ಹಾಗೂ‌ ಪರಿಚಯಸ್ಥರಿಂದ ಸುಮಾರು 21 ಸಾವಿರ ರೂಪಾಯಿ ಹಣ ಸಂಗ್ರಹಿಸಿದ್ದರು. ವ್ಯವಸ್ಥಿತ ಸಂಚಿನಂತೆ ಇದೇ ತಿಂಗಳು 6ರಂದು ಮಧ್ಯಾಹ್ನ ಹಾಸ್ಟೆಲ್ ವಾರ್ಡನ್ ಹಾಗೂ ಸೆಕ್ಯೂರಿಟಿ ಕಣ್ತಪ್ಪಿಸಿ ಲಗೇಜ್ ಸಮೇತ ತೊರೆದಿದ್ದರು. ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿ ಕೂಡಿಕೊಂಡು ಆಟೋ ಮೂಲಕ ಸೇವಾನಗರಕ್ಕೆ ತೆರಳಿದ್ದರು. ಅಂಗಡಿಯಲ್ಲಿ ಬಟ್ಟೆ ಖರೀದಿಸಿ ಕಂಟ್ಮೋನೆಂಟ್ ರೈಲು ನಿಲ್ದಾಣಕ್ಕೆ ಬಂದಿದ್ದರು. ವೇಲಾಂಗಣಿಗೆ ತೆರಳಲು ತೀರ್ಮಾನಿಸಿದ್ದ ಬಾಲಕಿಯರು ಗೊತ್ತಿಲ್ಲದೆ ಚೆನ್ನೈ ರೈಲು ಹತ್ತಿ ಸೆ.7ರಂದು ಇಳಿದಿದ್ದಾರೆ.

ಚೆನ್ನೈಗೆ ತೆರಳಿದ್ದ ಬಾಲಕಿಯರು:ಬಳಿಕ ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಸಂಜೆವರೆಗೂ ಕಾಲ ಕಳೆದಿದ್ದಾರೆ. ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಬಾಲಕಿಯರನ್ನು ಕಂಡ ರೈಲ್ವೇ‌‌ ಪೊಲೀಸರು‌ ಪ್ರಶ್ನಿಸಿದ್ದಾರೆ. ವಿಚಾರ ತಿಳಿದುಕೊಂಡು ಮತ್ತೆ ಬೆಂಗಳೂರು ರೈಲಿಗೆ ಹತ್ತಿಸಿದ್ದಾರೆ. ಮತ್ತೊಂದೆಡೆ ಮಕ್ಕಳು ಕಾಣೆಯಾಗಿರುವುದಾಗಿ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಇನ್​​ಸ್ಪೆಕ್ಟರ್ ಕಿರಣ್ ನೇತೃತ್ವದ ತಂಡ ವೇಲಾಂಗಣಿಗೆ ತೆರಳಿ ಶೋಧ ನಡೆಸುತಿತ್ತು‌‌. ರೈಲಿನಲ್ಲಿ ಕಂಟ್ಮೋನೆಂಟ್ ರೈಲು ನಿಲ್ದಾಣಕ್ಕೆ ಬಂದ ಬಾಲಕಿಯರು ಪೊಲೀಸರು ಕಾಣೆಯಾಗಿರುವ ತಮ್ಮ ಭಾವಚಿತ್ರಗಳನ್ನು ಅಂಟಿಸಿದ್ದ ಪ್ರಕಟಣೆ ಗಮನಿಸಿದ್ದಾರೆ.‌ ಇದರಿಂದ ಅಲರ್ಟ್ ಆದ ಬಾಲಕಿಯರು ಮತ್ತೆ ಚೆನ್ನೈಗೆ ತೆರಳಲು ನಿರ್ಧರಿಸಿ ಗೊತ್ತಿಲ್ಲದೆ ದೆಹಲಿ ರೈಲಿಗೆ ಹತ್ತಿದ್ದಾರೆ. ಮಾರ್ಗಮಧ್ಯೆ ಮಾರ್ಗ ಬದಲಾಯಿಸಿ ಹೇಗೋ ಚೆನ್ನೈ ಸೇರಿದ್ದಾರೆ.

ಸಲಿಂಗ ಮದುವೆಗೆ ಸಿದ್ಧತೆ ನಡೆಸಿದ್ದ ಶಾಲಾ ಬಾಲಕಿಯರು

ಸ್ಥಳೀಯ‌ ಆಟೋ ಚಾಲಕನನ್ನ ಬಳಿ ಹೋಗಿ ನಾವು ಅನಾಥೆಯರು. ಹಾಸ್ಟೆಲ್​​ನಲ್ಲಿ ನಮಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ತಮಿಳಿನಲ್ಲಿ ಮಾತನಾಡಿದ್ದಾರೆ.‌ ನಿಜವೆಂದು ಆಟೋ ಚಾಲಕ ತಮ್ಮ ಮನೆ ಹತ್ತಿರ ಮನೆ ಮಾಡಿಕೊಟ್ಟಿದ್ದಾನೆ. ಇದಕ್ಕೂ ಮುನ್ನ‌ ತೆಗೆದುಕೊಂಡು ಬಂದಿದ್ದ 20 ಸಾವಿರ ಹಣವನ್ನ ಕಳೆದುಕೊಂಡಿದ್ದರು. ಉಳಿದ ಅಲ್ಪ ಸ್ವಲ್ಪ ಹಣದಲ್ಲೇ ಮೊಬೈಲ್ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಲಿಂಗ ಮದುವೆಗೆ ಬಾಲಕಿಯರ ಸಿದ್ಧತೆ: ಕಾಣೆಯಾಗಿ ಕಳೆದ 20 ದಿನ ಕಳೆದರೂ ಬಾಲಕಿಯರು ಇರುವಿಕೆ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ‌. ಈ‌ ನಡುವೆ ಓರ್ವ ಬಾಲಕಿಯು ಕೆಲಸಕ್ಕೆ ಹೋಗುತ್ತಿದ್ದರು. ಮತ್ತೊರ್ವ ಬಾಲಕಿಯು ಹುಡುಗನ ರೀತಿಯಲ್ಲಿ ಓಡಾಡುತ್ತಿದ್ದಳು. ಮುಂದೆ ಮದುವೆಯಾಗಲು ಇಬ್ಬರು ಬಾಲಕಿಯರು ಸಿದ್ಧತೆ ಮಾಡಿಕೊಂಡಿದ್ದರು.‌

ಮಿಸ್​ ಕಾಲ್​ನಿಂದ ಸಿಕ್ಕ ಬಾಲಕಿಯರು: ಯಾರಿಗಾದರೂ ಫೋನ್ ಮಾಡಬೇಕಾದರೆ ಸ್ಥಳೀಯ ಕಾಯಿನ್ ಬೂತ್​​ನಿಂದ ಕರೆ ಮಾಡಿ ಮಾತನಾಡುತ್ತಿದ್ದರು. ಸತತವಾಗಿ‌ ಶೋಧ ನಡೆಸಿದರೂ ಬಾಲಕಿಯರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಖರೀದಿಸಿದ್ದ ಹೊಸ ಮೊಬೈಲ್​​ನಲ್ಲಿ ತಂದೆಗೆ ಬಾಲಕಿಯು ಮಿಸ್ ಕಾಲ್ ಕೊಟ್ಟಿದ್ದರು. ಮತ್ತೆ ಕರೆ ಮಾಡಿದರೂ ಮಾತನಾಡಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು‌. ಕೂಡಲೇ ಕಾರ್ಯಪ್ರವೃತ್ತರಾಗಿ ಚೆನ್ನೈಗೆ ತೆರಳಿ ಬಾಲಕಿಯರನ್ನು ಪತ್ತೆ ಹಚ್ಚಿ ನಗರಕ್ಕೆ‌ ಕರೆತಂದಿದ್ದಾರೆ. ಬಾಲಕಿಯ ಪೋಷಕರು ಹೈಕೋರ್ಟ್​ಗೆ ಹೇಬಿಯಸ್ ಅರ್ಜಿ ಹಾಕಿದ್ದರ ಹಿನ್ನೆಲೆಯಲ್ಲಿ ವಿಚಾರಣೆ ಮುಗಿಸಿ ನಾಳೆ ಮೂವರನ್ನು ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರಲ್ಲಿ ಒಂದೇ ಶಾಲೆಯ ಮೂವರು ಬಾಲಕಿಯರು ನಾಪತ್ತೆ

Last Updated : Sep 26, 2022, 5:36 PM IST

ABOUT THE AUTHOR

...view details