ಕರ್ನಾಟಕ

karnataka

ETV Bharat / state

Basavaraj Bommai: ಬಿಜೆಪಿಯ ನಾಲ್ವರು ಸಿಎಂಗಳಲ್ಲಿ ಮೂವರು ಲಿಂಗಾಯತರು- ಕಾಂಗ್ರೆಸ್‌ಗೆ ಬಸವರಾಜ ಬೊಮ್ಮಾಯಿ ತಿರುಗೇಟು

ಬಿಜೆಪಿಯ ಗರ್ಭಗುಡಿಯಲ್ಲಿ ಲಿಂಗಾಯತರೂ ಸೇರಿ ಎಲ್ಲರಿಗೂ ಪ್ರವೇಶವಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

Basavaraj Bommai
ಬಸವರಾಜ ಬೊಮ್ಮಾಯಿ

By

Published : Jun 16, 2023, 7:48 PM IST

ಬೆಂಗಳೂರು:''ರಾಜ್ಯ ಬಿಜೆಪಿಯಿಂದ ಈವರೆಗೂ ನಾಲ್ವರು ಮುಖ್ಯಮಂತ್ರಿಯಾಗಿದ್ದು, ಅದರಲ್ಲಿ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಆಗಿರುವುದೇ ಬಿಜೆಪಿಯಲ್ಲಿ ಲಿಂಗಾಯತ ಕಡೆಗಣನೆ ಮಾಡದಿರುವುದಕ್ಕೆ ಸಾಕ್ಷಿ. ಆದರೆ, ಮೂರೂವರೆ ದಶಕದಿಂದ ಕಾಂಗ್ರೆಸ್​ನಲ್ಲಿ ಯಾಕೆ ಲಿಂಗಾಯತ ಮುಖ್ಯಮಂತ್ರಿ ಮಾಡಲಿಲ್ಲ'' ಎಂದು ಕಾಂಗ್ರೆಸ್‌ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಬೊಮ್ಮಾಯಿ, ''ಭಾರತೀಯ ಜನತಾ ಪಾರ್ಟಿ ಲಿಂಗಾಯತ ಸಮುದಾಯವನ್ನು ಯಾವಾಗಲೂ ಗೌರವದಿಂದಲೇ ನೋಡಿಕೊಂಡು ಬಂದಿದೆ. ಬಿಜೆಪಿ ಎಂಬ ಒಂದೇ ಗುಡಿ ಇದ್ದು ಎಲ್ಲರಿಗೂ ಪ್ರವೇಶವಿದೆ. ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಅವಧಿ ಅಧಿಕಾರ ನಡೆಸಿದರೂ ನನ್ನ ಸಮೇತವಾಗಿ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿರುವುದೇ ಇದಕ್ಕೆ ಸಾಕ್ಷಿ'' ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಟ್ಟರು.

''ಕಾಂಗ್ರೆಸ್ ಪಕ್ಷ ಕಳೆದ ಮೂವತೈದು ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ಜಗತ್ತಿಗೆ ಗೊತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಲಿಂಗಾಯತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ, ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ. ನಮ್ಮ ಪಕ್ಷದ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ'' ಎಂದು ಕಾಂಗ್ರೆಸ್​ಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಹೇಳಿದ್ದೇನು?:ಜೋಶಿ, ಸಂತೋಷ್ ಅವರು ಸಂಸದ ಪ್ರತಾಪ್ ಸಿಂಹ ಹೆಗಲ ಮೇಲೆ ಗನ್​ ಇಟ್ಟು ಶೂಟ್ ಮಾಡಿದ ಗುಂಡು ಬಸವರಾಜ ಬೊಮ್ಮಾಯಿ ಅವರ ಎದೆಗೆ ತಗುಲಿದೆ. ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್. ಬೊಮ್ಮಾಯಿಯವರನ್ನು ಮುಗಿಸಿದರೆ "ಟಾರ್ಗೆಟ್ ಲಿಂಗಾಯತ" ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದಂತಾಗುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ಲಿಂಗಾಯತ ಸಿಎಂಗಳು ಭ್ರಷ್ಟರೆಂಬ ಹೇಳಿಕೆ- ಪ್ರಕರಣ ರದ್ದುಗೊಳಿಸಿದ ಕೋರ್ಟ್:2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಲಿಂಗಾಯುತ ಮುಖ್ಯಮಂತ್ರಿಗಳು ಭ್ರಷ್ಟರೆಂದು ಅರ್ಥೈಸುವಂತೆ ಕಾಂಗ್ರೆಸ್​ ನಾಯಕರಾಗಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಕೇಸ್​ ಅನ್ನು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಗೊಳಿಸಿ ಆದೇಶ ನೀಡಿತ್ತು. ಸಿದ್ದರಾಮಯ್ಯ ವಿರುದ್ಧ ಹುಬ್ಬಳ್ಳಿಯ ಶಂಕರ್ ಶೇಟ್ ಹಾಗೂ ಮಲ್ಲಯ್ಯ ಶಿವಲಿಂಗಯ್ಯ ಹಿರೇಮಠ ದಾಖಲು ಮಾಡಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ಪ್ರೀತ್ ಈ ಆದೇಶ ಕೊಟ್ಟಿದ್ದಾರೆ. ಅಲ್ಲದೇ, ಪ್ರಕರಣದಲ್ಲಿ ಪ್ರತಿವಾದಿ ಹೇಳಿಕೆ ಇಡೀ ಲಿಂಗಾಯತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿ ಹೇಳಿಕೆ ಕೊಟ್ಟಿಲ್ಲ. ಅವರು ನೀಡಿರುವ ಪ್ರತಿಕ್ರಿಯೆ ಸಿಎಂ ಸ್ಥಾನದಲ್ಲಿದ್ದವರಿಗೆ ಮಾತ್ರ ಸಂಬಂಧಿಸಿದಂತಿದೆ. ಸಿದ್ದರಾಮಯ್ಯ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಮಾನಹಾನಿಕರವಲ್ಲ. ಇದರಿಂದ ದೂರುದಾರರಾಗಿರುವವರಿಗೆ ಯಾವುದೇ ನೋವು ಉಂಟಾಗಿಲ್ಲ. ಅವರ ಪ್ರತಿಷ್ಠೆಗೆ ಹಾಗೂ ಘನತೆಗೆ ಧಕ್ಕೆ ಉಂಟಾಗಿಲ್ಲ. ಈ ಪ್ರಕರಣವನ್ನು ಮುಂದುವರೆಸಿದರೆ, ಕಾನೂನು ಪ್ರಕ್ರಿಯೆಯ ದುರುಪಯೋಗ ಆಗಲಿದೆ. ಇದರಿಂದ ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂದು ಹೇಳಿದ್ದ ನ್ಯಾಯಾಧೀಶರು ದೂರು ರದ್ದುಪಡಿಸಿದ್ದರು.

ಇದನ್ನೂ ಓದಿ:Priyanka Kharge: ಬಿಜೆಪಿ ಅಕ್ರಮಗಳ ತನಿಖೆ, ತಪ್ಪಿತಸ್ಥರು ಯಾರೇ ಇದ್ರೂ ಬಂಧಿಸ್ತೇವೆ- ಸಚಿವ ಪ್ರಿಯಾಂಕ್ ಖರ್ಗೆ

ABOUT THE AUTHOR

...view details