ಬೆಂಗಳೂರು: ರಾಜಧಾನಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕೋಣನಕುಂಟೆಯ ಚುಂಚನಕಟ್ಟೆ ಎಸ್ಬಿಐ ಲೇಔಟ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹೇಶ್, ಜ್ಯೋತಿ ಹಾಗೂ ಮಗ ನಂದೀಶ್ ಗೌಡ ಆತ್ಮಹತ್ಯೆಗೆ ಶರಣಾದವರು.
ಬಿಬಿಎಂಪಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಮೂಲತಃ ಮಳವಳ್ಳಿಯವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಮಹೇಶ್ ಮನೆಯ ರೂಮ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮತ್ತೊಂದು ರೂಮ್ನಲ್ಲಿ ಜ್ಯೋತಿ ಹಾಗೂ ಮಗ ನಂದೀಶ್ ವಿಷ ಸೇವಿಸಿದ್ದಾರೆ. ಸಾವಿಗೂ ಮುನ್ನ ಅನಾರೋಗ್ಯದಿಂದ ಈ ರೀತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿರುವ ಡೆತ್ನೋಟ್ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.