ಬೆಂಗಳೂರು:ಹಿಂದೂ ಯುವಕನಿಗೆ ಮತಾಂತರ ಮಾಡಿದ ಆರೋಪದಡಿ ಹುಬ್ಬಳ್ಳಿಯಿಂದ ಬನಶಂಕರಿ ಠಾಣೆಯಿಂದ ವರ್ಗವಾಗಿದ್ದ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬನಶಂಕರಿ ವಾರ್ಡ್ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾ, ನಯಾಜ್ ಖಾನ್ ಹಾಗೂ ಅಜೀಸಾಬ್ ಬಂಧಿತ ಆರೋಪಿಗಳಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಏಳು ಮಂದಿ ನಾಪತ್ತೆಯಾಗಿದ್ದು, ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕಾಸಿನ ನೆರವಿನ ನೆಪದಲ್ಲಿ ಪ್ರಕರಣದ ಮೊದಲ ಆರೋಪಿ ಅತ್ತಾವರ್ ರೆಹಮಾನ್ ಕಳೆದ ಒಂದು ವರ್ಷದ ಹಿಂದೆ ಬನಶಂಕರಿ ಮಸೀದಿಗೆ ಸಂತ್ರಸ್ತ ಶ್ರೀಧರ್ನನ್ನು ಕರೆತಂದು ಎಲ್ಲ ಆರೋಪಿಗಳನ್ನು ಪರಿಚಯಿಸಿದ್ದ. ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಹಂತ - ಹಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒತ್ತಡ ಹೇರಿದ್ದರು. ಅಕ್ರಮವಾಗಿ ಬಂಧನದಲ್ಲಿರಿಸಿ, ಬಲವಂತವಾಗಿ ಯುವಕನಿಗೆ ಖತ್ನಾ ಮಾಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಪೊರೇಟರ್ ಕೂಡ ಆರೋಪಿ:ಬಲವಂತದ ಮತಾಂತರ, ಖತ್ನಾ ಪ್ರಕರಣದಲ್ಲಿ ಕಾರ್ಪೊರೇಟರ್ ಅನ್ಸರ್ ಪಾಷಾ ಕೂಡ ಆರೋಪಿಯಾಗಿದ್ದು, ಅನ್ಸರ್ ಪಾಷಾನ ಸಂಬಂಧಿ ಖಬರಿಸ್ತಾನ್ ಮಸೀದಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ ಬಂಧಿತ ನಯಾಜ್ ಪಾಷಾ ಇಸ್ಲಾಂ ಧರ್ಮದ ಬೋಧನೆ ಮಾಡಿ, ಖತ್ನಾ ಮಾಡಿದಲ್ಲದೆ, ಬಲವಂತವಾಗಿ ಗೋಮಾಂಸ ತಿನ್ನಿಸಿರುವ ಆರೋಪ ಕೇಳಿ ಬಂದಿದೆ.
ಶ್ರೀಧರನಿಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಬಾಂಡ್ ಪೇಪರ್ ಬರೆಸಿಕೊಂಡಿದ್ದರು. ನಂತರ ಬನಶಂಕರಿಯ ಮಸೀದಿಗೆ ಕರೆತಂದು ಅಕ್ರಮವಾಗಿ ಗೃಹಬಂಧನದಲ್ಲಿಟ್ಟಿದ್ದರು. ಅಲ್ಲಿ ಶ್ರೀಧರ್ ಧಿಕ್ಕರಿಸಿದಾಗ ಪಿಸ್ತೂಲ್ ಇಟ್ಟು ಭಯೋತ್ಪಾದಕನಂತೆ ಬಿಂಬಿಸಿ ವಿಡಿಯೋ ಮಾಡಿ ಬೆದರಿಸಿದ್ದರು. ನಂತರ ಮತಾಂತರದ ಬಗ್ಗೆ ಬರೆಸಿಕೊಂಡು ಇದರ ಬಗ್ಗೆ ಏನಾದರೂ ಹೊರಗಡೆ ತಿಳಿದರೆ ಭಯೋತ್ಪಾದಕನಂತೆ ಬಿಂಬಿಸಿದ ವಿಡಿಯೋವನ್ನ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದರೊಂದಿಗೆ ಜೊತೆಗೆ ವರ್ಷಕ್ಕೆ ಮೂರು ಜನರನ್ನು ಕರೆತಂದು ಮತಾಂತರ ಮಾಡಿಸಬೇಕೆಂದು ಒತ್ತಡ ಹೇರಿದ್ದರು. ಈ ಬಗ್ಗೆ ದೂರಿನಲ್ಲಿ ಶ್ರೀಧರ್ ಉಲ್ಲೇಖಿಸಿರುವುದನ್ನು ಆಧರಿಸಿ ಸದ್ಯ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀಧರ್ ಅಲಿಯಾಸ್ ಸಲ್ಮಾನ್ ಮತಾಂತರ ಪ್ರಕರಣ : ಶ್ರೀಧರ್ ವಿಡಿಯೋ 'ಈಟಿವಿ ಭಾರತ'ಕ್ಕೆ ಲಭ್ಯ