ಬೆಂಗಳೂರು:ಜುಗ್ಗುರಾಜ್ ಜೈನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರು ಒಟ್ಟು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿರುವ ಪೊಲೀಸರು ಮತ್ತೊಬ್ಬ ಆರೋಪಿಗೆ ಜಾಲ ಬೀಸಿದ್ದಾರೆ.
ಏನಿದು ಪ್ರಕರಣ:ಚಾಮರಾಜಪೇಟೆಯ ಟೆಂಪಲ್ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್ ನನ್ನು ಮೇ 24 ರಂದು ರಾಜಸ್ಥಾನ ಮೂಲದ ಬಿಜೋರಾಮ್ ಕಣ್ಣಿಗೆ ಖಾರದಪುಡಿ ಎರಚಿ, ಕೈಕಾಲು ಕಟ್ಟಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರಿಗೆ ಬಿಜೋರಾಮ್ ಗುಜರಾತ್ನಲ್ಲಿ ಅಡಗಿರುವುದು ತಿಳಿದಿದೆ. ಕೂಡಲೇ ನಗರದ ಪೊಲೀಸರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಬಿಜೋರಾಮ್ನನ್ನು ಸೆರೆಹಿಡಿದು 23 ಲಕ್ಷ ಚಿನ್ನಾಭರಣ ಜಪ್ತಿ ಮಾಡಿದ್ದರು. ಬಳಿಕ ಬಿಜೋರಾಮ್ನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು.
ಪೊಲೀಸರು ಬೆಂಗಳೂರಿಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಸಹಚರರ ನೆರವಿನಿಂದ ಈ ಕೃತ್ಯ ಎಸಗಲು ಸಾಧ್ಯವಾಯಿತು ಎಂದು ಬೀಜೊರಾಮ್ ಬಾಯ್ಬಿಟ್ಟಿದ್ದ. ಈತ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಂದ್ರ, ಪೂರಾನ್ ಹಾಗೂ ಓಂ ಪ್ರಕಾಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 4,93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆಜಿ 870 ಗ್ರಾಂ ಬೆಳ್ಳಿ, 53 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಓಂರಾಮ್ ದೇವಸಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.