ಬೆಂಗಳೂರು: ಅಡಿಕೆ ಮತ್ತು ಕೊಬ್ಬರಿ ಮಾರಾಟದಿಂದ ಬಂದ ಹಣವನ್ನ ಕಾರಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಗಳನ್ನ ಬೆದರಿಸಿ ಡಕಾಯಿತಿ ಮಾಡಿದ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನ ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಸ್ಥಾಪಕ ಮಹೇಶ್, ಕಾರಿನ ಚಾಲಕ ಸ್ವಾಮಿತಿಲಕ್, ಫೋಟೋಗ್ರಾಫರ್ ಕಿಶೋರ್ ಬಂಧಿತ ಆರೋಪಿಗಳು.
ತುಮಕೂರು ಜಿಲ್ಲೆಯ ಗುಬ್ಬಿಯ ಅಡಿಕೆ ಮತ್ತು ತೆಂಗು ಬೆಳೆಗಾರ ಮೋಹನ್ ನಗರದ ಚಿಕ್ಕಪೇಟೆಯ ವ್ಯಾಪಾರಿ ಭರತ್ಗೆ ಅಡಿಕೆ, ಕೊಬ್ಬರಿ ಮಾರಾಟ ಮಾಡಿದ್ದರು. ಭರತ್ ಅವರಿಂದ ಬರಬೇಕಾದ ಹಣವನ್ನ ತರುವಂತೆ ಕೆಲಸಗಾರ ಶಿವಕುಮಾರ ಸ್ವಾಮಿಗೆ ತಿಳಿಸಿದ ಕಾರಣ ಕಾರಿನಲ್ಲಿ ನಗರಕ್ಕೆ ಬಂದಿದ್ದರು. ಈ ವೇಳೆ ಸಮಾಜವನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ ಹಾಗೂ ಪತ್ರಕರ್ತ ಜ್ಞಾನ ಪ್ರಕಾಶ್ ಮಾಹಿತಿ ತಿಳಿದು ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಹಣ ಲೂಟಿ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಪಶ್ಚಿಮ ವಿಭಾಗ ಡಿಸಿಪಿ, ಸಂಜೀವ್ ಎಂ ಪಾಟೀಲ್ ಅವರು ಸ್ವತಃ ತನಿಖೆಗೆ ಇಳಿದಿದ್ದು, ಪ್ರಕರಣದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಅನ್ನೋದರ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಜ್ಞಾನ ಪ್ರಕಾಶ್ ಹಾಗೂ ಜೀವನ್ ಕುಮಾರ್ಗೆ ಹೇಗೆ ಹಣದ ಮಾಹಿತಿ ಬಂತು ಅನ್ನೋದ್ರ ತನಿಖೆ ಮುಂದುವರಿಸಿದ್ದಾರೆ. ಸದ್ಯ ಮೋಹನ್ ಮನೆಯ ಕೆಲಸಗಾರರು ಹಣ ತರುವ ವಿಚಾರವನ್ನ ಬಂಧಿತ ಕಿಶೋರ್ ಅವರಿಗೆ ನಗರಕ್ಕೆ ಬರುವ ವಿಚಾರವನ್ನು ತಿಳಿಸಿದ್ದರು. ಕಿಶೋರ್ ಈ ಮಾಹಿತಿಯನ್ನ ಜ್ಞಾನ ಪ್ರಕಾಶ್ಗೆ ಹೇಳಿದ್ದ. ಇದನ್ನ ಜ್ಞಾನ ಪ್ರಕಾಶ್ ತನ್ನ ಸ್ವತಃ ಅಳಿಯನಾರದ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ಗೆ ಹೇಳಿ ಪ್ಲಾನ್ ಮಾಡಿ ಹಣ ಲೂಟಿ ಮಾಡಿದ್ದಾರೆ ಎಂದು ದೂರಲಾಗಿದೆ.
ಹಾಗೇ ಸದ್ಯ ಬಂಧಿತ ಪ್ರಮುಖ ಆರೋಪಿ ಜ್ಞಾನ ಪ್ರಕಾಶ್ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಅಧ್ಯಕ್ಷನಾಗಿದ್ದಾನೆ. ಬಂಧಿತ ಇಬ್ಬರೂ ಸಂಬಂಧಿಕರಾಗಿದ್ದು, ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಜ್ಞಾನ ಪ್ರಕಾಶ್ ಹಲವು ಸಚಿವರ ಬಳಿ ಕಾರು ಚಾಲಕನಾಗಿದ್ದ. ನಗರದ 8 ಕಡೆ ಹಾಗೂ 6 ರಾಜ್ಯದ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಕಚೇರಿ ಹೊಂದಿದ್ದ. ಸದ್ಯ ಆರೋಪಿ ಹಲವಾರು ಮಂದಿಗೆ ಇದೇ ರೀತಿ ಸಂಘಟನೆ ಹೆಸರು ಹೇಳಿಕೊಂಡು ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.