ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಬೆಂಗಳೂರು: ಕಳ್ಳತನ ಮಾಡಿದ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಸಾರ್ವಜನಿಕರ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಾರಿ ಮುತ್ತು, ಸೈಯ್ಯದ್ ಶುಹೇಬ್ ಹಾಗೂ ಭರತ್ ಬಂಧಿತ ಆರೋಪಿಗಳಾಗಿದ್ದಾರೆ.
ಡಿ.28ರಂದು ಸಂಜೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಬಿಳೇಕಹಳ್ಳಿ ಬಳಿ ಸುಜಿತ್ ಎಂಬಾತನ ಕೈಯಲ್ಲಿದ್ದ ಐಪೋನ್ ಎಗರಿಸಿ ಪರಾರಿಯಾಗಿದ್ದರು. ಫೋನ್ ಕಳೆದುಕೊಂಡ ಸುಜಿತ್ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಘಟನೆ ವರದಿಯಾಗಿ ಎರಡು ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಮೈಕೋಲೇಔಟ್ ಠಾಣಾ ಪೊಲೀಸರು ಫೋನ್ ಲೊಕೇಶನ್ ಆಧರಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆ ಸಂದರ್ಭದಲ್ಲಿ ಆರೋಪಿಗಳು ಈವರೆಗೆ ಆಗ್ನೇಯ ವಿಭಾಗದ ವಿವಿಧೆಡೆ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಸುಮಾರು 85 ಲಕ್ಷ ಮೌಲ್ಯದ 35 ಮೊಬೈಲ್ ಫೋನ್‌ಗಳು, ಎರಡು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕದ್ದು ತಂದ ಬೈಕ್ಗಳಲ್ಲೇ ಮೊಬೈಲ್ ಕಳವು : ಬೆಂಗಳೂರಲ್ಲಿ ಇಬ್ಬರು ಖದೀಮರು ಅಂದರ್
ಮುಖ್ಯ ರಸ್ತೆಯಲ್ಲಿ ಸಂಚರಿಸುವವರೇ ಇವರ ಟಾರ್ಗೆಟ್: ’‘ನಮ್ಮ ತಂಡದಿಂದ 35 ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲವೂ ಸ್ಮಾರ್ಟ್ ಫೋನ್ಗಳಾಗಿದ್ದು, ಇವುಗಳ ಮಾರುಕಟ್ಟೆ ಮೌಲ್ಯ ಅಂದಾಜು 85 ಲಕ್ಷ. ಆದರೆ, ಆರೋಪಿಗಳು ಈ ಕದ್ದ ಫೋನ್ಗಳನ್ನು 5-10 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಜಪ್ತಿ ಮಾಡಲಾದ ಫೋನ್ಗಳನ್ನ ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗುವುದು. ಇನಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸಾರ್ವಜನಿಕರು ಆದಷ್ಟು ಜಾಗೃತರಾಗಿರಬೇಕು. ಅಲ್ಲದೇ ಘಟನೆ ಬಳಿಕ 112ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು‘‘ ಎಂದು ಡಿಸಿಪಿ ಸಿ.ಕೆ.ಬಾಬಾ ಮನವಿ ಮಾಡಿದರು.
ಇಬ್ಬರು ಆರೋಪಿಗಳ ಬಂಧನ: ಇತ್ತೀಚೆಗೆ ಕಳ್ಳತನ ಮಾಡಿದ ದ್ವಿಚಕ್ರ ವಾಹನಗಳ ಮೂಲಕ ತೆರಳಿ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಹೆಡೆಮುರಿ ಕಟ್ಟಿದ್ದರು. ವಿಜಯ್ (21) ಮತ್ತು ಪ್ರವೀಣ್ (24) ಬಂಧಿತ ಆರೋಪಿಗಳು. ಇವರು ಸೋಮವಾರ ನಗರದ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದರು. ಬಳಿಕ ಅದೇ ಬೈಕ್ನಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಮೊಬೈಲ್‌ನಲ್ಲಿ ಮಾತನಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಂದ ಮೊಬೈಲ್ ಕಸಿದು ಪರಾರಿಯಾಗಿದ್ದರು.
ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಕಾರ್ಯಪ್ರವೃತ್ತರಾದ ಉಪ್ಪಾರಪೇಟೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 1.95 ಲಕ್ಷ ರೂಪಾಯಿ ಮೌಲ್ಯದ ಮೂರು ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರು ನಗರ ಬೆಳೆಯುತ್ತಲೇ ಸಾಗಿರುವುದರಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಲೇ ಇವೆ. ಸಿಲಿಕಾನ್ ಸಿಟಿ ಪೊಲೀಸರು ಹೆಚ್ಚುತ್ತಿರುವ ಇಂತಹ ಅಪರಾಧ ಪ್ರಕರಣಗಳ ತಡೆಗೆ ನಿರಂತರವಾಗಿ ಶ್ರಮಿಸುತ್ತಲೇ ಇದ್ದರೂ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ:ಕ್ಯೂ ಆರ್ ಕೋಡ್ ಸಿಸ್ಟಂ: ಜಾರಿಯಾದ 15 ದಿನಗಳಲ್ಲಿ ಬಂದ ದೂರುಗಳೆಷ್ಟು?