ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ನಗರದಾದ್ಯಂತ ಸುಮಾರು 3 ಗಂಟೆ ವರುಣ ಆರ್ಭಟಿಸಿದ್ದಾನೆ. ವಸಂತನಗರ, ರಾಜಾಜಿನಗರ, ಮಲೇಶ್ವರಂ, ಸೇರಿದಂತೆ ಹಲವೆಡೆ ಗುಡುಗು ಸಹಿತ ವರ್ಷಧಾರೆಯಾಗುತ್ತಿದೆ.
ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಆರ್ ಆರ್ ನಗರ, ಬಿಟಿಎಂ ಲೇಔಟ್, ಬಸವನಗುಡಿ, ಯಶವಂತಪುರ, ಪೀಣ್ಯದಲ್ಲಿ ವರದಿಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಮಧ್ಯಾಹ್ನದಿಂದ ಕಂಡು ಬಂದಿತ್ತು. ಗುಡುಗು ಮಿಂಚು ಸಹಿತ ವರ್ಷಧಾರೆಗೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಮಳೆಯಾಗುತ್ತಿದ್ದು, ಬಹುತೇಕ ಎಲ್ಲ ಭಾಗಗಳಲ್ಲಿಯೂ ಎಡೆ ಬಿಡದೇ ಸುರಿಯುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ ಎಸ್ ಪಾಟೀಲ್, ಕೊಪ್ಪಳದಲ್ಲಿ 12 ಸೆ. ಮೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಯಗಚಿ ಮತ್ತು ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣದಲ್ಲಿ 6 ಸೆ.ಮೀ , ಮುದಗಲ್ ಮತ್ತು ಜಾಲಹಳ್ಳಿಯಲ್ಲಿ 5 ಸೆ.ಮೀ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳ ಕೆಲವು ಕಡೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದರು.
ಉತ್ತರ ಒಳನಾಡಿನಲ್ಲಿ ಜೂನ್ 3 ರಿಂದ ಜೂನ್ 5 ರವರೆಗೆ ಬಹುತೇಕ ಎಲ್ಲ ಸ್ಥಳಗಲ್ಲಿ ಮಳೆಯಾಗಲಿದ್ದು, ಶಿವಮೊಗ್ಗ ಚಿಕ್ಕಮಗಳೂರು, ಹಾಸನ, ಕೊಡುಗು, ಚಾಮರಾಜನಗರ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರಿ ಮಳೆಯ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಜೂನ್ 6 ರಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ವಾರ ಲಾಕ್ಡೌನ್ ವಿಸ್ತರಣೆ: ಸಿಎಂ ಘೋಷಣೆ